







ಶಿಬಾಜೆ: ಓಂಕಾರ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ (ರಿ.), ಶಿಬಾಜೆ ಇದರ 2025–26ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.11ರಂದು ಪೆರ್ಲ ಶಿಬಾಜೆಯ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ಸುಕನ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಪಶುಸಖಿ ದಿವ್ಯಾ ಅವರ ದೇವರ ಸ್ತುತಿಯೊಂದಿಗೆ ಆರಂಭಿಸಲಾಯಿತು. LCRP ಗೀತಾ ಸ್ವಾಗತಿಸಿದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಮಾತನಾಡಿ, ಸಂಜೀವಿನಿ ಯೋಜನೆಯ ಪ್ರಮುಖ ಉದ್ದೇಶ, ಸದಸ್ಯರಿಗೆ ದೊರೆಯುವ ಸಾಲ ಸೌಲಭ್ಯಗಳು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಯೋಜನೆಯ ಪಾತ್ರದ ಕುರಿತು ಮಾಹಿತಿ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೀತಾರಾಮ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.


2025–26ನೇ ಸಾಲಿನ ಒಕ್ಕೂಟದ ವಾರ್ಷಿಕ ವರದಿಯನ್ನು ಪಶುಸಖಿ ದಿವ್ಯಾ ಹಾಗೂ ಲೆಕ್ಕಪರಿಶೋಧನಾ ವರದಿ ಮತ್ತು ಲೆಕ್ಕಪತ್ರಗಳನ್ನು ಕೃಷಿಸಖಿ ಜಯಂತಿ ಸಭೆಗೆ ಮಂಡಿಸಿದರು. ವರದಿ ಕುರಿತು ಚರ್ಚೆ ನಡೆಸಿ ಸಭೆಯ ಅನುಮೋದನೆ ಪಡೆಯಲಾಯಿತು.
ವಲಯ ಮೇಲ್ವಿಚಾರಕಿ ವೀಣಾಶ್ರೀ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಪ್ರಕ್ರಿಯೆ ನಡೆಯಿತು. ನೂತನ ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಒಕ್ಕೂಟವನ್ನು ಪ್ರಗತಿಪಥದಲ್ಲಿ ಮುನ್ನಡೆಸುವ ಕುರಿತು ಅವರು ಮಾಹಿತಿ ನೀಡಿದರು. ನಾಲ್ವರು ಪದಾಧಿಕಾರಿಗಳ ಬದಲಾವಣೆ ಮಾಡಲಾಯಿತು.ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿರ್ಗಮಿತ ಅಧ್ಯಕ್ಷೆ ಸುಕನ್ಯಾ ಅವರನ್ನು ಗೌರವಿಸಲಾಯಿತು. ತಮ್ಮ ಅವಧಿಯಲ್ಲಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸಿಬ್ಬಂದಿ ನೀಡಿದ ಸಹಕಾರವನ್ನು ಸ್ಮರಿಸಿದ ಅವರು ಕೃತಜ್ಞತೆ ಸಲ್ಲಿಸಿದರು.
ಅತಿಥಿಗಳು ಹಾಗೂ ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣಿಕೆ ವಿತರಿಸಲಾಯಿತು.LCRP ಮಾಲತಿ ಕಾರ್ಯಕ್ರಮ ನಿರೂಪಿಸಿದರು. MBK ಪಂಚಮಿ ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಹಳ್ಳಿ ಸಂತೆ: ಕಾರ್ಯಕ್ರಮದ ಬಳಿಕ ಹಳ್ಳಿ ಸಂತೆಯನ್ನು ಆಯೋಜಿಸಲಾಗಿದ್ದು, ಒಕ್ಕೂಟದ ಸದಸ್ಯರು ತಯಾರಿಸಿದ ವಿವಿಧ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿತ್ತು.









