







ತಾಲೂಕು ಕಾನೂನು ಸೇವೆಗಳ ಸಮಿತಿ (ರಿ) ಬೆಳ್ತಂಗಡಿ. ವಕೀಲರ ಸಂಘ ಬೆಳ್ತಂಗಡಿ ಮತ್ತು ಇಂಟರಾಕ್ಟ್ ಕ್ಲಬ್ ಬದನಾಜೆ ವತಿಯಿಂದ ಕಾನೂನು ಅರಿವು ಕಾರ್ಯಕ್ರಮವನ್ನು ಬದನಾಜೆ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಮನು ಬಿ ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾನೂನು ಅರಿವಿನ ಅಗತ್ಯ ಮತ್ತು ಪೌಷ್ಟಿಕತೆಯ ಮಹತ್ವವನ್ನು ಉದ್ಘಾಟನಾ ಭಾಷಣದ ನುಡಿಗಳಲ್ಲಿ ಹೇಳುತ್ತಾ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.


ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬೆಳ್ತಂಗಡಿಯ ವಕೀಲರಾದ ವಿನೋದರ ಮಾತನಾಡುತ್ತಾ ಮಕ್ಕಳ ರಕ್ಷಣೆಗೆ ಪೋಕ್ಸಿ ಕಾಯ್ದೆಯು ಹೇಗೆ ಸಹಾಯಕವಾಗುತ್ತದೆ ಮತ್ತು ಅದನ್ನು ಯಾವ ಸಂದರ್ಭದಲ್ಲಿ ಯಾವ ರೀತಿಯಾಗಿ ಉಪಯೋಗಿಸಿಕೊಳ್ಳಬಹುದು ಎಂಬುದಾಗಿ ಸವಿವರವಾಗಿ ತಿಳಿಸಿಕೊಟ್ಟರು. ವಿಶ್ವ ಪೌಷ್ಟಿಕ ಆಹಾರ ದಿನಾಚರಣೆಯ ಬಗ್ಗೆ ಮಾತನಾಡಿ ಪೌಷ್ಟಿಕತೆ ಮತ್ತು ಆರೋಗ್ಯ ಪರಸ್ಪರ ಹೇಗೆ ಸಂಬಂಧಿಸಿದೆ ಹಾಗೂ ಅದನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಮುನಾ ಕೆ ಎಸ್ ಕಾರ್ಯಕ್ರಮದ ಪ್ರಯೋಜನಗಳನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಆಲೋಶಿಯನ್ ಎನ್ ಲೋಬೋ, ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇಂಟರಾಕ್ಸ್ ಕ್ಲಬ್ಬಿನ ಸದಸ್ಯೆ ಚಿಂತನ ನಿರೂಪಿಸಿದರೆ ಆಯುಷತ್ ಹನಾ ಎಲ್ಲರನ್ನು ಸ್ವಾಗತಿಸಿ ವರ್ಷಿತಾ ಎಲ್ಲರಿಗೂ ವಂದಿಸಿದರು.









