







ಬರೆಂಗಾಯ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಬರೆಂಗಾಯ ಹಾಗೂ ನಿಸರ್ಗ ಯುವಜನ ಮಂಡಲ (ರಿ.) ಬರೆಂಗಾಯ–ನಿಡ್ಲೆ ಇವರ ಸಂಯುಕ್ತ ಆಶ್ರಯದಲ್ಲಿ 29ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಮೊಸರುಕುಡಿಕೆ ಉತ್ಸವ–2026 ಸೆ. 5ರಂದು ಬರೆಂಗಾಯ ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಜಗನ್ನಿವಾಸ ರಾವ್ ಪಾಲ್ತಿಮಾರು ಅವರು ಬೆಳಿಗ್ಗೆ 8.30ಕ್ಕೆ ಉದ್ಘಾಟಿಸಿದರು. ಬಳಿಕ ಮಹಿಳೆಯರು ಹಾಗೂ ಪುರುಷರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಮಹಿಳೆಯರ ವಿಭಾಗದಲ್ಲಿ ಶ್ರೀಕೃಷ್ಣ ಭಕ್ತಿಗೀತೆ, ಹಗ್ಗಜಗ್ಗಾಟ, ತ್ರೋಬಾಲ್, ಗುಂಡೆಸೆತ ಹಾಗೂ ಮೊಸರುಕುಡಿಕೆ ಸ್ಪರ್ಧೆಗಳು ನಡೆದರೆ, ಪುರುಷರ ವಿಭಾಗದಲ್ಲಿ ಗುಂಡೆಸೆತ, ಹಗ್ಗಜಗ್ಗಾಟ, ಮಲ್ಲಕಂಬ, ಕಬಡ್ಡಿ ಹಾಗೂ ಮೊಸರುಕುಡಿಕೆ ಸ್ಪರ್ಧೆಗಳು ಗಮನ ಸೆಳೆದವು.
ಮಲ್ಲಕಂಬ ಸ್ಪರ್ಧೆಯಲ್ಲಿ ವಿಜೇತರಿಗೆ ₹5,555 ನಗದು ಬಹುಮಾನ ಹಾಗೂ ನಿಸರ್ಗ ಟ್ರೋಫಿ ನೀಡಲಾಯಿತು. ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಬಹುಮಾನ ₹5,555, ದ್ವಿತೀಯ ₹4,444, ತೃತೀಯ ₹3,333 ಹಾಗೂ ಚತುರ್ಥ ₹2,222 ನಗದು ಬಹುಮಾನಗಳೊಂದಿಗೆ ನಿಸರ್ಗ ಟ್ರೋಫಿ ನೀಡಲಾಯಿತು. ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಹಾಗೂ ಸರ್ವಾಂಗೀಣ ಆಟಗಾರರಿಗೆ ನಿಸರ್ಗ ಟ್ರೋಫಿ ನೀಡಿ ಗೌರವಿಸಲಾಯಿತು.
ಮಕ್ಕಳಿಗಾಗಿ ಬಾಳೆಗಿಡ ಹತ್ತುವ ಸ್ಪರ್ಧೆ ಹಾಗೂ ಮಲ್ಲಕಂಬ ಸ್ಪರ್ಧೆ ನಡೆದಿದ್ದು, ವಿಜೇತರಿಗೆ ತಲಾ ₹1,001 ನಗದು ಬಹುಮಾನ ಹಾಗೂ ನಿಸರ್ಗ ಟ್ರೋಫಿ ನೀಡಲಾಯಿತು. ಸಂಜೆ 5 ಗಂಟೆಗೆ ಆರು ವರ್ಷದೊಳಗಿನ ಮಕ್ಕಳಿಗಾಗಿ ನಡೆದ ಶ್ರೀ ಮುದ್ದುಕೃಷ್ಣ ವೇಷ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿತ್ತು.ಕಾರ್ಯಕ್ರಮದ ಅಂಗವಾಗಿ ಸಂಜೆ 7 ಗಂಟೆಗೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಬರೆಂಗಾಯದ ಅಧ್ಯಕ್ಷ ಸುಬ್ಬರತ್ನ ಗೌಡ ಕಳ್ಳಿಮಾರು ವಹಿಸಿದ್ದರು. ವಕೀಲ ಪೃಥ್ವಿಶ್ ಧರ್ಮಸ್ಥಳ, ಮಂಗಳೂರು ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಕೆ.ಕೆ.ವಿ.ಎಸ್. ಎಜುಕೇಶನಲ್ ಟ್ರಸ್ಟ್ (ರಿ.), ಬೆಂಗಳೂರಿನ ಸಂಸ್ಥಾಪಕ ಕಾರ್ಯದರ್ಶಿ ಶ್ರೀನಿವಾಸರಾಜು ಪಿ., ಕಾರ್ಯದರ್ಶಿ ಅರ್ಕೇಶ್ ಬೆಂಗಳೂರು, ನ್ಯಾಷನಲ್ ಕಬ್ಬಡ್ಡಿ ಕೋಚ್ಗಳಾದ ನಾಗೇಶ ಮತ್ತು ಪುನೀತ್, ಬರೆಂಗಾಯ ಶಾಲೆಯ ಶಿಕ್ಷಣ ತಜ್ಞ ಪ್ರವೀಣ್ ಪೊಂರ್ದಿಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರುಕ್ಮಯ್ಯ ಪೂಜಾರಿ ಪೋರ್ಕಳ, ಬರೆಂಗಾಯ ಶಾಲಾ ಮುಖ್ಯ ಶಿಕ್ಷಕಿ ರೋಸಾ ವಿ.ಟಿ., ಬರೆಂಗಾಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಂದರ ಗೌಡ ಕಜೆ, ಜ್ಯೋತಿ ಹಿರಿಯ ವಿದ್ಯಾರ್ಥಿ ಸಂಘದ ಶಿವರಂಜನ್ ಹೆಬ್ಬಾರ್, ನಿಸರ್ಗ ಯುವಜನೇತರ ಮಂಡಲದ ಅಧ್ಯಕ್ಷ ಪುನೀತ್ ಪೊಂರ್ದಿಲ, ಭಾಸ್ಕರ ಆಚಾರ್ಯ ನೆಕ್ಕರ ಮುಂತಾದವರು ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಅಂಗನವಾಡಿ ಸಹಾಯಕ ಕಾರ್ಯಕರ್ತೆಯಾಗಿರುವ ಲಲಿತ ಅವರನ್ನು ಸನ್ಮಾನಿಸಲಾಯಿತು.ರಾತ್ರಿ 8.30ಕ್ಕೆ ಸಾಯಿ ಶಕ್ತಿ ಕಲಾಬಳಗ, ಉರ್ವ ಚಿಲಿಂಬಿ, ಮಂಗಳೂರು ಇವರಿಂದ ಲಾವಣ್ಯ ವಿಶ್ವಾಸ್ ದಾಸ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ‘ಜೋಡು ಜೀಟಿಗೆ’ ಎಂಬ ಅದ್ದೂರಿ ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಗಮನ ಸೆಳೆಯಿತು.ಉತ್ಸವದ ಅಂಗವಾಗಿ ಭಾಗವಹಿಸಿದ ಸ್ಪರ್ಧಾಳುಗಳು ಹಾಗೂ ಸಾರ್ವಜನಿಕರಿಗೆ ಬೆಳಿಗ್ಗೆ ಲಘು ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.
ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಉತ್ಸಾಹದಿಂದ ಪಾಲ್ಗೊಂಡಿದ್ದು, ಇಡೀ ಕಾರ್ಯಕ್ರಮವು ಶ್ರೀಕೃಷ್ಣ ಭಕ್ತಿಯೊಂದಿಗೆ ಸಡಗರ–ಸಂಭ್ರಮದಿಂದ ನೆರವೇರಿತು.ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಹಾಗೂ ನಿಸರ್ಗ ಯುವಜನ ಮಂಡಲದ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ಥಳೀಯರು ಸಹಕರಿಸಿದರು.
ಶಾಸಕ ಹರೀಶ್ ಪೂಂಜರಿಗೆ ಸನ್ಮಾನ ಮೊಸರುಕುಡಿಕೆ ಉತ್ಸವಕ್ಕೆ ಆಗಮಿಸಿದ ಬೆಸ್ಟ್ ಎಂಎಲ್ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜ ಅವರನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ನವೀನ್ ಗಾಂತ್ರಡ ಸ್ವಾಗತಿಸಿ, ಧನ್ಯವಾದವಿತ್ತರು. ಪುಟಾಣಿ ಗ್ರೀಷ್ಮ ಪ್ರಾರ್ಥಿಸಿದರು. ಆದಿತ್ಯ ಜೆ. ಶೆಟ್ಟಿ ಸ್ವಾಗತಿಸಿದರು. ಗೀತಾ ಹೇಮಂತ್ ಮತ್ತು ಶ್ವೇತ ಕೆ.ಜಿ. ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.
ಯುವಕರ ಒಗ್ಗಟ್ಟು ಸ್ಫೂರ್ತಿದಾಯಕ: ಶ್ರೀನಿವಾಸರಾಜು “ಕಾರಣಾಂತರಗಳಿಂದ ಇಲ್ಲಿನ ಯುವಕರೊಂದಿಗೆ ಒಡನಾಟ ಬೆಳೆಯಿತು. ನಾವು ದೂರದ ಬೆಂಗಳೂರಿನವರು. ಇಲ್ಲಿನ ಯುವಕರ ಒಗ್ಗಟ್ಟು ಮತ್ತು ಸಂಘಟನಾತ್ಮಕ ಶಕ್ತಿ ನಮಗೆ ಸ್ಫೂರ್ತಿ ನೀಡುವುದರ ಜೊತೆಗೆ ಇತ್ತಕಡೆ ನಮ್ಮ ಮನಸ್ಸು ಸೆಳೆಯುವಂತೆ ಮಾಡಿದೆ. ಗ್ರಾಮೀಣ ಕ್ರೀಡೆಗಳಿಗೆ ಇಲ್ಲಿನ ಯುವಕರು ನೀಡುವ ಬೆಂಬಲ ಅಮೋಘವಾಗಿದೆ.ನಮ್ಮ ಕಡೆಯಿಂದ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಸನ್ಮಾನಿಸುವುದಾಗಿ ತೀರ್ಮಾನಿಸಿದ್ದೇವೆ. ಇಲ್ಲಿನ ಜನರ ಜೊತೆಗೆ ಎಂದಿಗೂ ಇರುವ ಮನಸ್ಸಾಗಿದೆ,” ಎಂದು ಕೆ.ಕೆ.ವಿ.ಎಸ್. ಎಜುಕೇಶನಲ್ ಟ್ರಸ್ಟ್ (ರಿ.) ಹಾಗೂ ಕ್ಲಾಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರಿನ ಸಂಸ್ಥಾಪಕ ಕಾರ್ಯದರ್ಶಿ ಶ್ರೀನಿವಾಸರಾಜು ಪಿ. ಹೇಳಿದರು.
ಶರಣಾಗತಿಯ ಭಕ್ತಿ ಇರಬೇಕು: ಪೃಥ್ವಿಶ್ ಧರ್ಮಸ್ಥಳ“ಕೃಷ್ಣ ಗುರುವಿನ ಸ್ಥಾನದಲ್ಲಿ ನಿಲ್ಲುತ್ತಾನೆ. ಹಿಂದೂ ಧರ್ಮದಲ್ಲಿ ದೇವರಿಗೆ ರೂಪ, ಆಕಾರ, ಶಕ್ತಿ ಎಲ್ಲವನ್ನೂ ಕೊಟ್ಟು ವಿಸರ್ಜನೆ ಮಾಡುತ್ತೇವೆ. ದೇವರನ್ನು ಒಲಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ಅದರಲ್ಲಿ ಭಕ್ತಿ ಮಾರ್ಗವೂ ಒಂದು.ಭಗವಂತ ನೀಡಿದ ಶಕ್ತಿಯನ್ನು ನಾವು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು. ಭಕ್ತಿ ಮತ್ತು ನಮ್ಮ ಮಧ್ಯೆ ಕಾಂಟ್ರಾಕ್ಟ್ ಆರಂಭವಾಗಿದೆ. ‘ನನಗೆ ಇದು ಆದರೆ ನಿನಗೆ ಇದು ಕೊಡುತ್ತೇನೆ’ ಎಂಬ ಮಾದರಿಯ ಭಕ್ತಿ ಇರಬಾರದು. ನಮ್ಮ ತಪ್ಪನ್ನು ಯಾರಿಂದ ಬೇಕಾದರೂ ಮುಚ್ಚಿಡಬಹುದು. ಆದರೆ ದೇವರಿಂದ ಮುಚ್ಚಿಡಲು ಸಾಧ್ಯವಿಲ್ಲ. ನಮ್ಮಲ್ಲಿ ಶರಣಾಗತಿಯ ಭಕ್ತಿ ಇರಬೇಕೇ ಹೊರತು ಕಾಂಟ್ರಾಕ್ಟ್ ಮಾದರಿಯ ಭಕ್ತಿ ಇರಬಾರದು.ಮನುಷ್ಯನಿಗೆ ಬರುತ್ತಿರುವ ಸಹಜ ಸಮಸ್ಯೆಗಳೆಲ್ಲ ಪರಮಾತ್ಮ ಶ್ರೀಕೃಷ್ಣನಿಗೂ ಇತ್ತು. ವಯಸ್ಸಿಗೆ ಬಂದ ಯುವಕ–ಯುವತಿಯರು ಕೃಷ್ಣ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು,” ಎಂದು ಧಾರ್ಮಿಕ ಉಪನ್ಯಾಸದಲ್ಲಿ ವಕೀಲ ಪೃಥ್ವಿಶ್ ಧರ್ಮಸ್ಥಳ ಹೇಳಿದರು.
ಒಳ್ಳೆಯ ಮನಸ್ಸನ್ನು ಗುರುತಿಸಿಕೊಂಡಾಗ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ: ಪ್ರವೀಣ್ ಪೊಂರ್ದಿಲ “ನಮ್ಮಲ್ಲಿ ಇರುವಂತಹ ಒಳ್ಳೆಯ ಮನಸ್ಸನ್ನು ನಾವೇ ಗುರುತಿಸಿಕೊಂಡಾಗ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ ಎಂಬುದನ್ನು ಕೃಷ್ಣ ಪರಮಾತ್ಮನಿಂದ ತಿಳಿದುಕೊಂಡಿದ್ದೇವೆ.ಮನುಷ್ಯನಲ್ಲಿ ಒತ್ತಡಗಳ ಮೂಲಕ ಆಲೋಚನೆಗಳು ಹೆಚ್ಚಾಗಿವೆ. ಹಿಂದಿನ ಕಾಲದಲ್ಲಿ ಹೆಚ್ಚು ಆಲೋಚನೆಗಳು ಇರಲಿಲ್ಲ. ಶಾಂತ ಸ್ವಭಾವದಿಂದ ಮನುಷ್ಯರು ಜೀವನ ನಡೆಸುತ್ತಿದ್ದರು. ಇಂತಹ ಕಾರ್ಯಕ್ರಮಗಳು ಮನುಷ್ಯನನ್ನು ಒತ್ತಡದಿಂದ ವಿಮುಖಗೊಳಿಸುತ್ತವೆ.ನಿಸರ್ಗ ಯುವಜನೇತರ ಸಂಘದವರು ಇಲ್ಲಿನ ಅನೇಕ ಕಾರ್ಯಕ್ರಮಗಳನ್ನು ಒತ್ತಡರಹಿತವಾಗಿ ನಡೆಸಲು ಸಹಕಾರ ನೀಡುತ್ತಾ ಬಂದಿದ್ದಾರೆ,” ಎಂದು ಬರೆಂಗಾಯ ಶಾಲಾ ಶಿಕ್ಷಣ ತಜ್ಞ ಪ್ರವೀಣ್ ಪೊಂರ್ದಿಲ ಹೇಳಿದರು.









