






ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲು ಬಸ್ ನಿಲ್ದಾಣದ ಬಳಿ ಸೆ. 3 ರಾತ್ರಿ ಕಾಡಾನೆಯೊಂದು ರಸ್ತೆ ಮಧ್ಯೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.


ಸೆ. 3ರಂದು ರಾತ್ರಿ ಸುಮಾರು 10.30ರ ವೇಳೆಗೆ ಉಜಿರೆ-ಬೆಳಾಲು-ಬಂದಾರು ಮುಖ್ಯರಸ್ತೆಯಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸವಾರನಿಗೆ ಮಿನಂದೇಲು ಗ್ರಾಮದ ಡಿ.ಪಿ. ಸ್ಪೋರ್ಟ್ಸ್ ಕ್ಲಬ್ ಮೈದಾನದ ಪಕ್ಕದಲ್ಲಿರುವ ಬಸ್ ನಿಲ್ದಾಣದ ಸಮೀಪ ಏಕಾಏಕಿ ಕಾಡಾನೆ ಎದುರಾಗಿದೆ. ರಸ್ತೆ ಮಧ್ಯದಲ್ಲೇ ಆನೆ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಬೈಕ್ ಸವಾರ ಯಾವುದೇ ಅಪಾಯಕ್ಕೆ ಸಿಲುಕದೆ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಕಾಡಾನೆ ಮಂಜನೊಟ್ಟು ಪ್ರದೇಶದಿಂದ ಭಂಡಾರಿ ಮಜಲು ಮೂಲಕ ಸಂಚರಿಸಿ, ರಾತ್ರಿ ಸುಮಾರು 1.35ರ ವೇಳೆಗೆ ಮುಂಡೇತ್ಯಾರು ದಾಟಿ ಕೆಳಗಿನ ಬೆಳಾಲು ಭಾಗದತ್ತ ತೆರಳಿದೆ. ಆನೆಯ ಚಲನವಲನದಿಂದ ಈ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ.









