ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ – ಭಾರತ ಮತ್ತು ಜಪಾನ್

0

ಭಾರತ ಮತ್ತು ಜಪಾನ್ ನಡುವಿನ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಲಾ ವಿಭಾಗದ ವಿದ್ಯಾರ್ಥಿಗಳೊಂದಿಗೆ ಜಪಾನಿನ ತಂಡವೊಂದು ಒಂದು ತಿಂಗಳ ಕಾಲ ಎಸ್.ಡಿ.ಎಂ. (ಸ್ವಾಯತ್ತ) ಪದವಿ ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದೆ.

ಈ ತಂಡವು ಎಸ್.ಡಿ.ಎಂ. ಮಹಿಳಾ ಐ.ಟಿ.ಐ.ಗೆ ಭೇಟಿ ನೀಡಿ, ವಿದ್ಯಾರ್ಥಿನಿಯರು ತಯಾರಿಸಿದ ವಿಶೇಷ ಹೊಲಿಗೆ ವಿನ್ಯಾಸಗಳು ಹಾಗೂ ಕರಕುಶಲ ವಸ್ತುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿತು. ನಂತರ ಜಪಾನ್‌ನಲ್ಲಿ ತಯಾರಿಸುವ ಉಡುಪುಗಳು, ಉಣ್ಣೆಯ ಬ್ಯಾಗ್‌ಗಳು, ವಿವಿಧ ಕರಕುಶಲ ವಸ್ತುಗಳು ಹಾಗೂ ಕೈಮಗ್ಗದ ಕುರಿತು ಮಾಹಿತಿಯನ್ನು ಹಂಚಿಕೊಂಡರು.

ಈ ಭೇಟಿಯು ಎಸ್.ಡಿ.ಎಂ. ಮಹಿಳಾ ಐ.ಟಿ.ಐ.ಯ ವಿದ್ಯಾರ್ಥಿನಿಯರು ಮತ್ತು ಜಪಾನಿನ ತಂಡದ ನಡುವೆ ಪರಸ್ಪರ ಸಂವಹನ, ಸಂಸ್ಕೃತಿ, ಸಂಪ್ರದಾಯ, ಅನುಭವ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸಿತು.ಈ ರೀತಿಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಸ್ನೇಹ, ಪರಸ್ಪರ ತಿಳುವಳಿಕೆ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗುತ್ತವೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ವಿ. ಪ್ರಕಾಶ್ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿರಿ ಸಂಸ್ಥೆಯ ಮಾಜಿ ನಿರ್ದೇಶಕಿ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷೆ ಹಾಗೂ ಜಪಾನ್ ತಂಡದ ಸಂಚಾಲಕಿ ಮನೋರಮ ಅವರು ಕಾರ್ಯಕ್ರಮಕ್ಕೆ ಸೂಕ್ತ ಸಹಕಾರ ನೀಡಿ, ಜಪಾನ್ ತಂಡದ ಭೇಟಿಯ ಉದ್ದೇಶಗಳನ್ನು ಹಂಚಿಕೊಂಡರು. ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುತ್ತಿರುವ ಎಸ್‌ಡಿಎಂ ಕಾಲೇಜಿನ ಬಿ.ಎ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಸಂಜನಾ ಅವರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here