ಲಾಯಿಲ ಗ್ರಾಮಸಭೆಯಲ್ಲಿ ಅಕ್ರಮಗಳ ಬಗ್ಗೆ ಕಿಡಿ – ಸಮಗ್ರ ತನಿಖೆಗೆ ಒತ್ತಾಯ

0

ಬೆಳ್ತಂಗಡಿ: ಪಡ್ಲಾಡಿ-ನಿನ್ನಿಕಲ್ಲು ಬಳಿಯ ನೇತಾಜಿ ಬಡಾವಣೆಯ ನಿವೇಶನ ಹಂಚಿಕೆ, ಖಾಲಿ ನಿವೇಶನಗಳಿಗೆ ಬ್ಯಾಂಕ್ ಸಾಲ, ನಿವೇಶನಗಳ ಅನಧಿಕೃತ ಮಾರಾಟ, ಮನೆ ನಿರ್ಮಿಸಿ ಬಾಡಿಗೆಗೆ ನೀಡಿರುವ ಆರೋಪ, ಸರ್ಕಾರಿ ಜಮೀನು ಅತಿಕ್ರಮಣ, ಪುತ್ರಬೈಲು ಗ್ರಂಥಾಲಯ ಮತ್ತು ಎನ್‌ಆರ್‌ಎಲ್‌ಎಂ ಕಟ್ಟಡಗಳ ಕಳಪೆ ಕಾಮಗಾರಿ, ಅನಧಿಕೃತ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಗಂಭೀರ ವಿಚಾರಗಳು ಲಾಯಿಲ ಗ್ರಾಮಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾದವು.

ಆ.29ರಂದು ಲಾಯಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಡಳಿತಾಧಿಕಾರಿ ರಾಜೇಂದ್ರ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ನಡೆಯಿತು. ಬೆಳಗ್ಗೆ 10.45ಕ್ಕೆ ಆರಂಭವಾದ ಸಭೆ ಸಂಜೆ 4.30ರವರೆಗೆ ಸುಮಾರು 6 ಗಂಟೆಗಳ ಕಾಲ ಸುದೀರ್ಘವಾಗಿ ನಡೆಯಿತು.

2012ರಲ್ಲಿ ನೇತಾಜಿ ಬಡಾವಣೆಯಲ್ಲಿ ಹಂಚಿಕೆ ಮಾಡಲಾದ ಖಾಲಿ ನಿವೇಶನಗಳನ್ನು ಸರ್ಕಾರ ವಾಪಸ್ ಪಡೆದು ಅರ್ಹ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು ಎಂದು ಮಾಜಿ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ಆಗ್ರಹಿಸಿದರು. ನಿವೇಶನ ರಹಿತರು 10-15 ವರ್ಷದಿಂದ ಅರ್ಜಿ ಹಾಕಿದರೂ ಸಿಕ್ಕಿಲ್ಲ ಎಂದು ಒತ್ತಾಯಿಸಿದರು. ಇದಕ್ಕೆ ಸುಧಾಕರ ಬಿ.ಎಲ್, ಗಿರೀಶ್ ಡೋಂಗ್ರೆ, ಗಣೇಶ್ ಆಕ್ಷೇಪ ವ್ಯಕ್ತಪಡಿಸಿದರು.

02.45 ಸೆಂಟ್ಸ್ ಜಮೀನಿನ ಹೆಸರಿನಲ್ಲಿ ಬ್ಯಾಂಕುಗಳು ಲಕ್ಷಾಂತರ ರೂಪಾಯಿ ಸಾಲ ನೀಡಿರುವುದು ಹೇಗೆ ಎಂದು ಶೇಖರ್ ಎಲ್ ಪ್ರಶ್ನಿಸಿದರು. ನಿವೇಶನಗಳ ಅನಧಿಕೃತ ಮಾರಾಟ ಹಾಗೂ ಬಾಡಿಗೆಗೆ ನೀಡಿರುವ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು. ಸ್ವಂತ ಜಮೀನು ಇದ್ದರೂ 94ಸಿ ಸೇರಿದಂತೆ ಸರ್ಕಾರಿ ಜಮೀನು ಅತಿಕ್ರಮಣ ಮಾಡಿರುವ ಬಗ್ಗೆಯೂ ತನಿಖೆ ಆಗಬೇಕು ಎಂದು ಸುಧಾಕರ ಎಲ್ ಆಗ್ರಹಿಸಿದರು.

ಪುತ್ರಬೈಲು ಗ್ರಂಥಾಲಯ ಕಟ್ಟಡದ ಮೇಲೆ ಶೀಟ್ ಹಾಕಿರುವ ಬಗ್ಗೆ ಶ್ರೀನಿವಾಸ್ ಪ್ರಶ್ನಿಸಿದಾಗ ಸೋರಿಕೆ ತಡೆಗೆ ಹಾಕಲಾಗಿದೆ ಎಂದು ಪಿಡಿಒ ತಾರಾನಾಥ ನಾಯ್ಕ್ ಉತ್ತರಿಸಿದರು. ಆದರೆ ಕಳಪೆ ಕಾಮಗಾರಿ ಮುಚ್ಚಲು ಶೀಟ್ ಹಾಕಲಾಗಿದೆ ಎಂದು ಶೇಖರ್ ಲಾಯಿಲ ಆರೋಪಿಸಿ ತನಿಖೆಗೆ ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾ ಪಂಚಾಯತ್‌ಗೆ ಮನವಿ ಸಲ್ಲಿಸುವುದಾಗಿ ನೋಡೆಲ್ ಅಧಿಕಾರಿ ಜನಾರ್ದನ ತಿಳಿಸಿದರು. ಎನ್‌ಆರ್‌ಎಲ್‌ಎಂ ಕಟ್ಟಡದ ಕಾಮಗಾರಿಯೂ ತನಿಖೆಯಾಗಬೇಕು ಎಂದು ಗಿರೀಶ್ ಡೋಂಗ್ರೆ ಒತ್ತಾಯಿಸಿದರು.

ಸರ್ಕಾರಿ ಜಮೀನಿನಲ್ಲಿ ಪಂಚಾಯತ್ ಸಿಬ್ಬಂದಿ ಸೂರಪ್ಪ ಮನೆ ನಿರ್ಮಿಸುತ್ತಿದ್ದಾರೆ ಎಂಬ ವಿಚಾರಕ್ಕೆ ವಾಗ್ವಾದ ನಡೆಯಿತು. ಸಾರ್ವಜನಿಕರ ಒತ್ತಾಯದ ಬಳಿಕ ಸೂರಪ್ಪ ಅವರು “ನಾನೇ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸುತ್ತಿದ್ದೇನೆ” ಎಂದು ಸಭೆಯಲ್ಲಿ ಒಪ್ಪಿಕೊಂಡರು. ಪ್ರಕರಣ ತಹಶೀಲ್ದಾರ್ ಗಮನಕ್ಕೆ ಬಂದಿದ್ದು ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಆಡಳಿತಾಧಿಕಾರಿ ತಿಳಿಸಿದರು.

ಅನಧಿಕೃತ ಕಟ್ಟಡ, ಆದರ್ಶನಗರ ರಸ್ತೆ, ಬೀದಿನಾಯಿಗಳ ಹಾವಳಿ, ಸಾರ್ವಜನಿಕ ಆಸ್ಪತ್ರೆಗೆ ಜಮೀನು ಕಾಯ್ದಿರಿಸುವಿಕೆ, ಕಿಂಡಿ ಅಣೆಕಟ್ಟು ಬಳಿ ಮಣ್ಣು ಹಾಕಿರುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ವಾರದೊಳಗೆ ಜಂಟಿ ತನಿಖೆಗೆ ನೋಡೆಲ್ ಅಧಿಕಾರಿ ಸೂಚಿಸಿದರು.

ಪಿಡಿಒ ತಾರಾನಾಥ ನಾಯ್ಕ್ ಸ್ವಾಗತಿಸಿದರು, ಸಹಾಯಕ ಲೆಕ್ಕಾಧಿಕಾರಿ ಸುಪ್ರೀತಾ ಶೆಟ್ಟಿ ಲೆಕ್ಕಪತ್ರ ಮಂಡಿಸಿ ವಂದಿಸಿದರು, ಮೋಹನ್ ವಾರ್ಡ್ ಸಭಾ ವರದಿ ಮಂಡಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here