






ಬೆಳಾಲು : ಬೆಳಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆ.27ರಂದು ಕೃಷಿ ಇಲಾಖೆ ಜಿಲ್ಲಾ ತರಬೇತಿ ಕೇಂದ್ರ ಬೆಳ್ತಂಗಡಿ, ನಾಗಾಂಬಿಕ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಬೆಳಾಲು ಇದರ ಸಹಯೋಗದೊಂದಿಗೆ ಅಡಿಕೆಯಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ರೋಗ ಮತ್ತು ಕೀಟಗಳ ಹತೋಟಿ ವಿಧಾನ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬೆಳಾಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕೃಷಿ ಅಧಿಕಾರಿ ಹಾಗೂ ಬೆಳಾಲು ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಗಣೇಶ್ ಇವರು ಇಲಾಖೆಯಿಂದ ನಡೆಸುವ ತರಬೇತಿಯ ಕುರಿತು ಹಾಗೂ ಬೆಳೆ ಸಮೀಕ್ಷೆಯ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.


ಸಂಪನ್ಮೂಲ ವ್ಯಕ್ತಿಗಳಾದ ಪ್ರಭಾಕರ ಮಯ್ಯ ರೈತರಿಗೆ ಉತ್ತಮ ತರಬೇತಿಯನ್ನು ನೀಡಿದರು. ಅಡಿಕೆ ಕೃಷಿಯನ್ನು ಹೇಗೆ ಅಭಿವೃದ್ಧಿಪಡಿಸುವುದು, ಅಡಿಕೆ ಗಿಡದಲ್ಲಿ ಬರುವ ರೋಗ ಹಾಗೂ ಕೊರತೆಗಳು ಮತ್ತು ಅದನ್ನು ಯಾವ ರೀತಿಯ ಪೋಷಕಾಂಶಗಳನ್ನು ನೀಡಿ ನಿರ್ವಹಣೆ ಮಾಡಬಹುದು ಎಂಬುದನ್ನು ಸವಿವರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿಯಾದ ಉಮಾದೇವಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು, ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗ್ರಾಮದ ರೈತರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಎಂಬಿಕೆ ಹರಿಣಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿ, ಎಲ್ ಸಿ ಆರ್ ಪಿ ಸರಸ್ವತಿ ವಂದಿಸಿದರು.









