







ಕೊಕ್ಕಡ: ನಿಡ್ಲೆ ಗ್ರಾಮದ ನೆಡಿಲು ಪರಿಸರದಲ್ಲಿ ಮಂಗಳವಾರದಂದು ರಾತ್ರಿ ಕಾಡಾನೆಯೊಂದು ತೋಟಕ್ಕೆ ನುಗ್ಗಿ ಬಾಳೆಗಿಡ ಹಾಗೂ ಅಡಿಕೆ ಗಿಡಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ.


ನೆಡಿಲು ಗ್ರಾಮದ ನಾರಾಯಣ ಗೌಡ ಅವರ ತೋಟಕ್ಕೆ ರಾತ್ರಿ ವೇಳೆ ನುಗ್ಗಿದ ಕಾಡಾನೆ, ತೋಟದಲ್ಲಿದ್ದ ಬಾಳೆಗಿಡಗಳು ಹಾಗೂ ಅಡಿಕೆ ಗಿಡಗಳನ್ನು ತುಳಿದು ಹಾಗೂ ಮುರಿದು ಹಾನಿಗೊಳಿಸಿದೆ. ಕಾಡಾನೆಯ ದಾಳಿಯಿಂದ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಕಾಡಾನೆ ತೋಟಕ್ಕೆ ನುಗ್ಗಿರುವುದರಿಂದ ಸ್ಥಳೀಯ ರೈತರು ಆತಂಕಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿ, ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.









