






ನಿಡ್ಲೆ: ನಿಡ್ಲೆ ಗ್ರಾಮ ಪಂಚಾಯತ್ನ 2026–27ನೇ ಸಾಲಿನ ಪ್ರಥಮ ಗ್ರಾಮಸಭೆಯು ಜುಲೈ 30ರಂದು ನಿಡ್ಲೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಡಳಿತಾಧಿಕಾರಿ ಹಾಗೂ ಕೃಷಿ ಇಲಾಖೆಯ ಅಧಿಕಾರಿ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಗೆ ಮಾರ್ಗದರ್ಶಿ ಅಧಿಕಾರಿಯಾಗಿ ನೆರಿಯ ಪಶು ಆಸ್ಪತ್ರೆಯ ಹಿರಿಯ ಪಶುವೈದ್ಯಾಧಿಕಾರಿ ಡಾ. ಯತೀಶ್ ಆಗಮಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್, ಕಾರ್ಯದರ್ಶಿ ಕೇಶವ, ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲೇ ಕೆಲವು ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಸರ್ಕಾರದ ವಿವಿಧ ಯೋಜನೆಗಳ ಕುರಿತು ವಿವರಿಸಿದರು.

ಕೆಎಸ್ಆರ್ಟಿಸಿ ಬಸ್ ಸಮಸ್ಯೆ ಮತ್ತೆ ಪ್ರಸ್ತಾಪ: ಗ್ರಾಮಸಭೆಯಲ್ಲಿ ನಿಡ್ಲೆ ಭಾಗದ ಪ್ರಮುಖ ಸಮಸ್ಯೆಯಾದ ಕೆಎಸ್ಆರ್ಟಿಸಿ ಬಸ್ ಸೇವೆಯ ಕುರಿತು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸ್ಥ ಕಿಶೋರ್ ಮಾತನಾಡಿ, ಧರ್ಮಸ್ಥಳ–ಸುಬ್ರಹ್ಮಣ್ಯ ಮಾರ್ಗದ ಕೆಎಸ್ಆರ್ಟಿಸಿ ಬಸ್ಗಳು ನಿಡ್ಲೆಯಲ್ಲಿ ನಿಲ್ಲಿಸದೇ ಸಾಗುತ್ತಿರುವುದರಿಂದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರೂ ಧರ್ಮಸ್ಥಳ–ನೆಲ್ಯಾಡಿ ಬಸ್ ಸೇವೆ ಆರಂಭವಾಗಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಆರ್ಟಿಸಿ ಅಧಿಕಾರಿ, ಸುಬ್ರಹ್ಮಣ್ಯ ಮಾರ್ಗದ ಬಸ್ಗಳಿಗೆ ನಿಡ್ಲೆಯಲ್ಲಿ ನಿಲುಗಡೆ ನೀಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ಪ್ರತಿಯಾಗಿ ಗ್ರಾಮಸ್ಥರು, ಕಳೆದ ಮೂರು ವರ್ಷಗಳಿಂದ ಪ್ರತಿಯೊಂದು ಗ್ರಾಮಸಭೆಯಲ್ಲೂ ಇದೇ ಸಮಸ್ಯೆಯನ್ನು ಪ್ರಸ್ತಾಪಿಸುತ್ತಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಿದ್ಯಾರ್ಥಿಗಳು ಖಾಸಗಿ ಜೀಪ್ ಹಾಗೂ ಬೈಕ್ಗಳಲ್ಲಿ ಪ್ರಯಾಣಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಬದಿಯ ಅಪಾಯಕಾರಿ ಮರ ತೆರವಿಗೆ ಒತ್ತಾಯ: ಗ್ರಾಮಸ್ಥ ಸಿದ್ದಪ್ಪ ಗೌಡ ಮಾತನಾಡಿ, ಪಟ್ರಮೆ–ನಿಡ್ಲೆ ರಸ್ತೆ ಬದಿಯಲ್ಲಿರುವ ನಾಲ್ಕು ದೊಡ್ಡ ಮರಗಳು ಅಪಾಯದ ಸ್ಥಿತಿಯಲ್ಲಿದ್ದು, ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಮನ್ವಯದೊಂದಿಗೆ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗಸ್ತು ಅರಣ್ಯಪಾಲಕ ಸುನಿಲ್, ಸ್ಥಳ ಪರಿಶೀಲಿಸಿ ಮೆಸ್ಕಾಂ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ವಿದ್ಯುತ್ ಲೈನ್ ತೆರವುಗೊಳಿಸಿದ ಬಳಿಕ ಮರಗಳನ್ನು ಕಡಿಯಲಾಗುವುದು ಎಂದು ತಿಳಿಸಿದರು.
ಬಿದಿರು ನೆಡುವ ಯೋಜನೆಗೆ ಒತ್ತು: ಗ್ರಾಮಸ್ಥ ವಸಂತಗೌಡ ಬಿದಿರು ಸಸಿಗಳ ಲಭ್ಯತೆ ಕುರಿತು ಪ್ರಶ್ನಿಸಿದರು. ಇದಕ್ಕೆ ಪಿಡಿಒ ದಿನೇಶ್, ಸಾಮಾಜಿಕ ಅರಣ್ಯ ಯೋಜನೆಯಡಿ ಬಿದಿರು ನೆಡುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಎಚ್ಪಿವಿ ಲಸಿಕೆ ಕುರಿತು ಸ್ಪಷ್ಟನೆ: ಸಭೆಯಲ್ಲಿ ಸಮುದಾಯ ಆರೋಗ್ಯಾಧಿಕಾರಿ (CHO) ಮಳೆಗಾಲದಲ್ಲಿ ಆರೋಗ್ಯ ಮುನ್ನೆಚ್ಚರಿಕೆ ಹಾಗೂ ಎಚ್ಪಿವಿ ಲಸಿಕೆ ಕುರಿತು ಮಾಹಿತಿ ನೀಡಿದರು. ಈ ವೇಳೆ ಗ್ರಾಮಸ್ಥ ಆನಂದ ಎಂ.ಕೆ., ಎಚ್ಪಿವಿ ಲಸಿಕೆಯಿಂದ ಹೆಣ್ಣು ಮಕ್ಕಳಲ್ಲಿ ಬಂಜೆತನ ಉಂಟಾಗುತ್ತದೆ ಎಂಬ ಮಾಹಿತಿ ಹರಿದಾಡುತ್ತಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಚ್ಒ, ಎಚ್ಪಿವಿ ಲಸಿಕೆಯಿಂದ ಅಂತಹ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಟೈಗರ್ ರಿಸರ್ವ್ ಕುರಿತು ಆತಂಕ: ಗ್ರಾಮಸ್ಥ ಕಿಶೋರ್ ಮಾತನಾಡಿ, ನಿಡ್ಲೆ ಭಾಗವನ್ನು ಟೈಗರ್ ರಿಸರ್ವ್ ವ್ಯಾಪ್ತಿಗೆ ಸೇರಿಸುವ ಬಗ್ಗೆ ಮಾಹಿತಿ ಕೇಳಿಬರುತ್ತಿದ್ದು, ಇದರಿಂದ ಭೂ ಖರೀದಿ–ಮಾರಾಟಕ್ಕೆ ತೊಂದರೆಯಾಗುವ ಆತಂಕವಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ದಿನೇಶ್, ಗ್ರಾಮಸ್ಥರ ಅಭಿಪ್ರಾಯದಂತೆ ಈ ಭಾಗದಲ್ಲಿ ಟೈಗರ್ ರಿಸರ್ವ್ ಬೇಡ ಎಂಬ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.



ಒಟಿಪಿ ವಂಚನೆ ಕುರಿತು ಜಾಗೃತಿ: ಪೊಲೀಸ್ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಒಟಿಪಿ ವಂಚನೆ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿದರು. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಕರೆ ನೀಡಿದರು.
ಕೋವಿ ಪರವಾನಗಿ ಕುರಿತು ಮನವಿ: ಗ್ರಾಮಸ್ಥ ಕಿಶೋರ್, ಕೋವಿ ಪರವಾನಗಿ ತಂದೆಯಿಂದ ಮಗನಿಗೆ ವರ್ಗಾವಣೆಗೆ ಇರುವ ನಿಯಮಗಳು ಹಾಗೂ ಕಾಡುಪ್ರಾಣಿಗಳ ಹಾವಳಿಗೆ ಸಂಬಂಧಿಸಿದ ಷರತ್ತುಗಳಿಂದ ಗ್ರಾಮೀಣರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಪಶುಗಳಲ್ಲಿ ಚರ್ಮಗಂಟು ರೋಗ ತಡೆಗೆ ಸಲಹೆ: ಹಿರಿಯ ಪಶುವೈದ್ಯಾಧಿಕಾರಿ ಡಾ. ಯತೀಶ್ ಮಾತನಾಡಿ, ಚರ್ಮಗಂಟು ರೋಗವು ಸೊಳ್ಳೆಗಳ ಮೂಲಕ ಹರಡುವುದರಿಂದ ಕೊಟ್ಟಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಸಂಜೆ–ಬೆಳಿಗ್ಗೆ ಹೊಗೆ ಹಾಕುವ ಮೂಲಕ ಸೊಳ್ಳೆ ನಿಯಂತ್ರಣ ಮಾಡುವುದು ಅಗತ್ಯ ಎಂದು ತಿಳಿಸಿದರು. ಗ್ರಾಮಸ್ಥರು ಬೀದಿ ನಾಯಿಗಳಿಗೆ ನಿಯಮಿತ ಲಸಿಕೆ ನೀಡುವಂತೆ ಆಗ್ರಹಿಸಿದರು.
ವಿದ್ಯುತ್ ಹಾಗೂ ಇಂಟರ್ನೆಟ್ ಸಮಸ್ಯೆ ಪ್ರಸ್ತಾಪ: ಗ್ರಾಮಸ್ಥ ಕಿಶೋರ್, ರಸ್ತೆ ಅಭಿವೃದ್ಧಿ ಕಾಮಗಾರಿಯ ವೇಳೆ ಮೆಸ್ಕಾಂ ಕಂಬಗಳಲ್ಲಿದ್ದ ಬಿಎಸ್ಎನ್ಎಲ್ ಫೈಬರ್ ಕೇಬಲ್ ಕಟ್ ಮಾಡಿದ್ದರಿಂದ 15 ದಿನಗಳ ಕಾಲ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿತ್ತು. ಮುಂದಿನ ದಿನಗಳಲ್ಲಿ ಸಮನ್ವಯದೊಂದಿಗೆ ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ ನಿರ್ತಲ್ಕೆ–ಬಾವಲಿ ರಸ್ತೆಯಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವುದು ಹಾಗೂ ಪರಾಂಡ ಬಳಿಯ ಹಳೆಯ ಟಿಸಿ ವೈರ್ ಬದಲಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಭಾರತ್ ಜೋಡೋ ಸಂಘ ರಚನೆಗೆ ಕರೆ: ಪಿಡಿಒ ದಿನೇಶ್, 16 ರಿಂದ 35 ವರ್ಷದೊಳಗಿನ ಎಲ್ಲಾ ಸಮುದಾಯಗಳ ಯುವಜನರನ್ನು ಒಳಗೊಂಡು ‘ಭಾರತ್ ಜೋಡೋ ಸಂಘ’ ರಚಿಸುವ ಕುರಿತು ಮಾಹಿತಿ ನೀಡಿ, ಗ್ರಾಮಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣಕ್ಕೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.
ಘನ ತ್ಯಾಜ್ಯ ವಿಲೇವಾರಿ ಹಾಗೂ ಚರಂಡಿ ನಿರ್ವಹಣೆ: ನಿಡ್ಲೆ ಗ್ರಾಮದಲ್ಲಿ ಘನ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಹಿಂದಿನಿಗಿಂತ ಉತ್ತಮಗೊಂಡಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಅಗತ್ಯವಿದೆ ಎಂದು ಪಿಡಿಒ ತಿಳಿಸಿದರು.
ನೀರ್ತಳಿಕೆ–ಬಾವಲಿ ರಸ್ತೆಯ ಚರಂಡಿ ದುರಸ್ತಿಗೆ ಗ್ರಾಮಸ್ಥರು ಮನವಿ ಮಾಡಿದಾಗ, ಪಂಚಾಯತ್ ಅನುದಾನದ ಮಿತಿಯನ್ನು ಗಮನಿಸಿ ಮನೆಗಳ ಎದುರಿನ ಚರಂಡಿಗಳನ್ನು ಸಾಧ್ಯವಾದಷ್ಟು ಶ್ರಮದಾನದ ಮೂಲಕ ನಿರ್ವಹಿಸಲು ಗ್ರಾಮಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಬೆಳೆ ಸಮೀಕ್ಷೆ ಹಾಗೂ ಮಳೆಮಾಪನ ಸಮಸ್ಯೆ: ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆ ಅಧಿಕಾರಿ ಗಣೇಶ್, ಸೆಂಟ್ರಲ್ ಐಡಿ ನೋಂದಣಿ ಹಾಗೂ ಅದರ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಆಗಸ್ಟ್ 15ರ ಬಳಿಕ ಬೆಳೆ ಸಮೀಕ್ಷೆ ಆರಂಭವಾಗಿ ಅಕ್ಟೋಬರ್ ಒಳಗೆ ಪೂರ್ಣಗೊಳ್ಳಲಿದ್ದು, ರೈತರು ಕಡ್ಡಾಯವಾಗಿ ಸಮೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಈ ವೇಳೆ ಗ್ರಾಮಸ್ಥರು ಮಳೆಮಾಪನ ಯಂತ್ರ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಬೆಳೆ ವಿಮೆ ಪರಿಹಾರ ವಿಳಂಬ ಹಾಗೂ ಕಡಿಮೆ ಮೊತ್ತದಲ್ಲಿ ದೊರೆಯುತ್ತಿದೆ ಎಂದು ದೂರಿದರು. ಸಂಬಂಧಿಸಿದ ಅಧಿಕಾರಿಗಳ ಮೂಲಕ ಮಳೆಮಾಪನ ಯಂತ್ರವನ್ನು ತ್ವರಿತವಾಗಿ ದುರಸ್ತಿಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗಣೇಶ್ ತಿಳಿಸಿದರು.
ಕಾರ್ಯದರ್ಶಿ ಕೇಶವ ಸ್ವಾಗತಿಸಿದರು. ಗ್ರಂಥಪಾಲಕಿ ಶಕುಂತಳಾ ಜೆ. ಶೆಟ್ಟಿ ವಂದಿಸಿದರು. ಪಂಚಾಯತ್ ಸಿಬ್ಬಂದಿ ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು.









