






ನಾರಾವಿ: ನಾರಾವಿ ಗ್ರಾಮದ 4ನೇ ವಾರ್ಡ್‌ನ ನೂಜೋಡಿ ಅಂಗನವಾಡಿ ಸಮೀಪದ ನಾರಾವಿ–ನೂಜೋಡಿ–ಮಾಪಾಲು ಸಂಪರ್ಕ ರಸ್ತೆ ಕಳೆದ ಮಳೆಗಾಲದಲ್ಲಿ ಕುಸಿದಿದ್ದು, ಇದೀಗ 30ಕ್ಕೂ ಹೆಚ್ಚು ಮಲೆಕುಡಿಯ ಕುಟುಂಬಗಳು ಆತಂಕದ ನಡುವೆ ಸಂಚಾರ ನಡೆಸುವಂತಾಗಿದೆ.


ರಸ್ತೆಯ ಅಂಚು ಸಂಪೂರ್ಣವಾಗಿ ಕುಸಿದು ದೊಡ್ಡ ಗುಂಡಿ ನಿರ್ಮಾಣವಾಗಿರುವುದರಿಂದ ವಾಹನ ಸಂಚಾರ ಹಾಗೂ ಕಾಲ್ನಡಿಗೆಯಲ್ಲೂ ಅಪಾಯ ಎದುರಾಗಿದೆ. ರಸ್ತೆ ಮತ್ತಷ್ಟು ಕುಸಿಯುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಈ ರಸ್ತೆಯಲ್ಲಿ ಈಗಾಗಲೇ ಹಲವು ಸಣ್ಣ-ಪುಟ್ಟ ಅಪಘಾತಗಳು ಸಂಭವಿಸಿದ್ದು, ಸುಮಾರು ಎರಡು ವಾರಗಳ ಹಿಂದೆ ಶ್ರೀಧರ ಮಲೆಕುಡಿಯ ಎಂಬವರು ಬೈಕ್‌ನೊಂದಿಗೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಪಾಯವನ್ನು ಮನಗಂಡು ಗ್ರಾಮ ಪಂಚಾಯತ್ ರಸ್ತೆ ಬಳಿ ಎಚ್ಚರಿಕೆ ಫಲಕ ಅಳವಡಿಸಿದೆ. ಆದರೆ, ಎಚ್ಚರಿಕೆ ಫಲಕ ಅಳವಡಿಸುವುದರಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಶಾಲಾ ಮಕ್ಕಳು, ಹಿರಿಯ ನಾಗರಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಪ್ರತಿದಿನ ಇದೇ ರಸ್ತೆಯಲ್ಲಿ ಜೀವಭಯದ ನಡುವೆ ಸಂಚರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಮಳೆ ಮತ್ತಷ್ಟು ಸುರಿದರೆ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಕ್ಷಣ ಶಾಶ್ವತ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.









