







ಬೆಳ್ತಂಗಡಿ: ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ, ವನಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಗಿಡ ವಿತರಣಾ ಕಾರ್ಯಕ್ರಮ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ಜನಸಂಪರ್ಕ ಸಭೆಯು ಜು. 12 ರಂದು ಪಣಕಜೆಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸರ್ಕಾರಿ ನೌಕರ ಲೋಕೇಶ್ ಬೆಂಗಳೂರು ಮಾತನಾಡಿ, “ಸಾಮಾಜಿಕ ಜಾಲತಾಣಗಳ ಮೂಲಕ ಸತ್ಯ ಶೋಧಕ ವೇದಿಕೆಯ ಸಮಾಜಮುಖಿ ಕೆಲಸಗಳನ್ನು ನಾನು ಗಮನಿಸಿದ್ದೇನೆ. ವಿಶೇಷವಾಗಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಇವರ ಕಾರ್ಯ ಅಭಿನಂದನೀಯ. ಇಂತಹ ಸಮಾಜಪರ ಕಾರ್ಯಗಳು ಮುಂದೆಯೂ ನಿರಂತರವಾಗಿ ನಡೆಯಲಿ” ಎಂದು ಶುಭಹಾರೈಸಿದರು.


ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಜೇಶ್ ಅವರು ಕಾನೂನು ಅರಿವು ಮೂಡಿಸುತ್ತಾ, ಮೋಟಾರ್ ವಾಹನ ಕಾಯ್ದೆ, ಪೋಕ್ಸೋ (POCSO) ಕಾಯ್ದೆ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿವಿಧ ರೀತಿಯ ಸೈಬರ್ ಸ್ಕ್ಯಾಮ್ಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ಹಾಗೂ ಮಾಹಿತಿ ನೀಡಿದರು. ವೇದಿಕೆಯ ಸಮಾಜಪರ ಕಾಳಜಿಯನ್ನು ಅವರು ಪ್ರಶಂಸಿಸಿದರು.ಪರಿಸರ ರಕ್ಷಣೆಗೆ ಕರೆ:ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸತ್ಯ ಶೋಧಕ ವೇದಿಕೆಯ ಅಧ್ಯಕ್ಷ ಸುಕೇಶ್ ಕೆ ಮಾತನಾಡಿ, “ಪರಿಸರ ಜಾಗೃತಿ ನಮ್ಮ ಸಂಘಟನೆಯ ಉದ್ದೇಶಗಳಲ್ಲಿ ಒಂದಾಗಿದೆ. ಭವಿಷ್ಯದ ದೃಷ್ಟಿಯಿಂದ ಮರ-ಗಿಡಗಳನ್ನು ಬೆಳೆಸುವುದು ಅನಿವಾರ್ಯ. ಪ್ರತಿಯೊಂದು ಮನೆಯಲ್ಲಿಯೂ ಮಕ್ಕಳ ಹುಟ್ಟುಹಬ್ಬದ ನೆನಪಿಗಾಗಿ ಒಂದು ಗಿಡ ನೆಡುವ ಸಂಪ್ರದಾಯವನ್ನು ಬೆಳೆಸಿಕೊಳ್ಳಿ. ಗ್ರಾಮ ಮಟ್ಟದಲ್ಲಿ ನಡೆಯುವ ಇಂತಹ ಜನಸಂಪರ್ಕ ಸಭೆಗಳಲ್ಲಿ ಮಹಿಳೆಯರು ಮತ್ತು ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾನೂನು ಅರಿವನ್ನು ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸುಮಾರು 60 ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಗುಲಾಬಿ, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎ.ಎಸ್.ಐ ಬಾಲಕೃಷ್ಣ, ವೇದಿಕೆಯ ಉಪಾಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು.
ವೇದಿಕೆಯ ಕೋಶಾಧಿಕಾರಿ ಯೋಗೀಶ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಹರೀಶ್ ಪಣಕಜೆ ವಂದನಾರ್ಪಣೆಗೈದರು.









