






ಬೆಳ್ತಂಗಡಿ : ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ ಕಾಲೇಜಿನ ಸಭಾಂಗಣದಲ್ಲಿ ಜು. 14 ರಂದು ನಡೆಯಿತು.
ಪ್ರಾರ್ಥನಾ ನೃತ್ಯ ಹಾಗೂ ಸ್ವಾಗತ ಗೀತೆಯೊಂದಿಗೆ, ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾಲೇಜಿನ ಉಪಪ್ರಾಂಶುಪಾಲೆ ಭಗಿನಿ ಸಹಾಯ ಮೇರಿ ಆಗಮಿಸಿದ ಎಲ್ಲ ಗಣ್ಯರು ಹಾಗೂ ಉಪಸ್ಥಿತರಿದ್ದ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಗಿನಿ ಜುಲಿಯಾನಾ ಪಾಯ್ಸ್ ವಹಿಸಿದ್ದರು. ಅವರು ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಪೋಷಕರ ಸಹಭಾಗಿತ್ವ ಅತ್ಯಂತ ಮಹತ್ವದ್ದಾಗಿದೆ. ಉತ್ತಮ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲರಾದ ಬಗಿನಿ ಮೋಲಿ ಡಿಕುನ್ನ ಅವರು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು, ವಿದ್ಯಾರ್ಥಿಗಳ ಸಾಧನೆಗಳು ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಸಂತ ತೆರೇಸಾ ಕಾನ್ವೆಂಟಿನ ಸುಪೀರಿಯರ್ ಬಗಿನಿ ಜೆಸಿಂತಾ ಬರೆಟ್ಟೋ ಹಾಗೂ ಸಂತ ತೆರೇಸಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಬಗಿನಿ ಲೀನಾ ಡಿಸೋಜಾ ಉಪಸ್ಥಿತರಿದ್ದು, 2025–26ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಆಲ್ವಿನ್ ಪಿಂಟೋ ಉಪಸ್ಥಿತರಿದ್ದರು. ಉಪನ್ಯಾಸಕಿ ಜೀಟಾ ಅವರು 2025–26ನೇ ಶೈಕ್ಷಣಿಕ ವರ್ಷದ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಶಾಲಾ–ಕಾಲೇಜಿನ ಕಾರ್ಯಚಟುವಟಿಕೆಗಳ ಅಂಗವಾಗಿ 2026–27ನೇ ಶೈಕ್ಷಣಿಕ ವರ್ಷವನ್ನು ‘ಸ್ವಚ್ಛ ವಾತಾವರಣ, ಆರೋಗ್ಯಕರ ಜೀವನ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಿರು ನಾಟಕದ ಮೂಲಕ ಉದ್ಘಾಟಿಸಲಾಯಿತು.
ಸಭೆಯಲ್ಲಿ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕ ಲೋಕೇಶ್ ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕಿ ನಿರೂಪಮ ನಿರೂಪಿಸಿದರು. ಉಪನ್ಯಾಸಕಿ ರಶ್ಮಿ ವಂದನಾರ್ಪಣೆಗೈದರು. ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.









