






ಧರ್ಮಸ್ಥಳ: ಕಳೆದ ಹಲವು ವರ್ಷಗಳಿಂದ ಹದಗೆಟ್ಟಿರುವ ಅಜಿಕುರಿಯ ಮುಂಡಾಜೆ ಸಂಪರ್ಕ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜು. 7ರಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅಜಿಕುರಿ ಮುಖ್ಯರಸ್ತೆ ಕಳೆದ ಐದಾರು ವರ್ಷಗಳಿಂದ ಸಂಪೂರ್ಣ ಹಳ್ಳ-ಗುಂಡಿಮಯವಾಗಿದ್ದು, ವಾಹನ ಸವಾರರು ಹಾಗೂ ಸ್ಥಳೀಯರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.


ಈ ಕುರಿತಾಗಿ ಸುದ್ದಿ ನ್ಯೂಸ್ ಕೂಡ ವಿಸ್ತೃತ ವರದಿ ಮಾಡಿತ್ತು. 2010ರಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಂಡ ಈ ರಸ್ತೆ ಇದೀಗ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಈ ರಸ್ತೆ ಮುಂಡಾಜೆ ಭಾಗಕ್ಕೆ ಪ್ರಮುಖ ಸಂಪರ್ಕ ಕಲ್ಪಿಸುವುದರ ಜೊತೆಗೆ ಧರ್ಮಸ್ಥಳ ದೇವಸ್ಥಾನಕ್ಕೆ ನೇತ್ರಾವತಿಯಿಂದ ತೀರ್ಥವನ್ನು ತೆಗೆದುಕೊಂಡು ಹೋಗುವ ಅರ್ಚಕರು ಸಹ ಇದೇ ರಸ್ತೆಯನ್ನು ಬಳಸಬೇಕಾಗಿದೆ.
ಇಂತಹ ಮಹತ್ವದ ರಸ್ತೆ ದುರವಸ್ಥೆಗೆ ಒಳಗಾಗಿರುವುದು ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಅದೇ ರೀತಿ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಕ್ಷಣ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.









