






ಪಟ್ಟೂರು: ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಹಾಗೂ ಇದರ ಬೆಳ್ತಂಗಡಿ ಘಟಕದ ಸಹಯೋಗದೊಂದಿಗೆ, ‘ಯಕ್ಷ ಧ್ರುವ – ಯಕ್ಷ ಶಿಕ್ಷಣ’ ಯೋಜನೆಯಡಿ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯ ತರಗತಿಯ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವನ್ನು ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಕೇಂದ್ರೀಯ ಸಮಿತಿಯ ಟ್ರಸ್ಟಿಯಾಗಿದ್ದ ಶ್ರೀ ಭುಜಬಲಿ ಧರ್ಮಸ್ಥಳರವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಸಂಚಾಲಕ ಶ್ರೀ ಪ್ರಶಾಂತ ಶೆಟ್ಟಿ ದೇರಾಜೆ ವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿರುವುದು ಅಭಿನಂದನೀಯ ಮತ್ತು ಇದು ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ನ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ, ಫೌಂಡೇಶನ್ನ ಸದಸ್ಯರಾದ ಶ್ರೀ ಮಂಜುನಾಥ ಶೆಟ್ಟಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಚಂದ್ರಶೇಖರ ಶೇಟ್ ಉಪಸ್ಥಿತರಿದ್ದರು. ಯಕ್ಷಗಾನ ಗುರುಗಳಾದ ಶ್ರೀ ಈಶ್ವರ ಪ್ರಸಾದ್ ಪಿ. ವಿ. ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ಅಭ್ಯಾಸವನ್ನು ಪ್ರಾರಂಭಿಸಿಕೊಟ್ಟರು.









