







ಮಚ್ಚಿನ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ಗುರುವಾಯನಕೆರೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಡಂತ್ಯಾರ್ ಹಾಗೂ ಕುದ್ರಡ್ಕ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಮಚ್ಚಿನ ಇವರ ಸಂಯುಕ್ತ ಆಶ್ರಯದಲ್ಲಿ, ಮಚ್ಚಿನ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ 40ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಜರುಗಿತು.
ಕಾರ್ಯಕ್ರಮವನ್ನು ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಶ್ವರರಾದ ಡಾ. ಯಂ. ಹರ್ಷ ಸಂಪಿಗೆತ್ತಾಯ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಧರ್ಮದ ಜಾಗೃತಿ ಅಗತ್ಯ: ಧರಣೇಂದ್ರ ಜೈನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಧಾರ್ಮಿಕ ಉಪನ್ಯಾಸಕ ಧರಣೇಂದ್ರ ಜೈನ್ ಮಾತನಾಡಿ, “ಇಂದಿನ ದಿನಗಳಲ್ಲಿ ಮಕ್ಕಳಿಗೆ ಧರ್ಮದ ಮೌಲ್ಯಗಳನ್ನು ತಿಳಿಸಿಕೊಡುವುದು ಪೋಷಕರ ಜವಾಬ್ದಾರಿಯಾಗಿದೆ. ಸತ್ಯನಾರಾಯಣ ದೇವರ ನಾಮಸ್ಮರಣೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದಲ್ಲದೆ, ಬದುಕಿನಲ್ಲಿ ಸನ್ಮಾರ್ಗ ಸಿಗುತ್ತದೆ” ಎಂದು ಕಿವಿಮಾತು ಹೇಳಿದರು.


ಸಭಾಧ್ಯಕ್ಷತೆಯನ್ನು ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಹರ್ಷ ಬಳ್ಳಮಂಜ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಾರೆಂಕಿ ಶ್ರೀ ಮಹಿಷ ಮರ್ದಿನಿ ಕ್ಷೇತ್ರದ ಆಡಳಿತ ಮುಕ್ತೇಶ್ವರರಾದ ಪುನೀತ್, ಪ್ರಗತಿಪರ ಕೃಷಿಕ ಕೃಷ್ಣ ಪ್ರಭು ಮುದಲಡ್ಕ, ಹಿರಿಯರಾದ ಸದಾನಂದ ಪೂಜಾರಿ ಕುರುಡಂಗೆ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಹರೀಶ್, ವಲಯ ಅಧ್ಯಕ್ಷ ಜಯ ಪೂಜಾರಿ ಮುದ್ದಲಡ್ಕ, ಮೇಲ್ವಿಚಾರಕ ಕೇಶವ, ಅರ್ಚಕ ಅನಂತ ಕೃಷ್ಣ ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಚ್ಚಿನ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಸದಸ್ಯರಾದ ಪಾಂಡಿಮೂಲ್ಯ ಕುತ್ತಿನ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಅಲ್ಲದೆ, ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸೇವಾ ಪ್ರತಿನಿಧಿ ಪರಮೇಶ್ವರ ಸ್ವಾಗತಿಸಿದರು. ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ ಕೋಲಾಜೆ ಕಾರ್ಯಕ್ರಮ ನಿರೂಪಿಸಿದರು. ಅಂತಿಮವಾಗಿ ಅಂಗನವಾಡಿ ಕಾರ್ಯಕರ್ತೆ ಪುಷ್ಪ ವಂದನಾರ್ಪಣೆ ಸಲ್ಲಿಸಿದರು.ವರದಿ: ಹರ್ಷ ಬಳ್ಳಮಂಜ









