






ಬೆಳ್ತಂಗಡಿ: ನಿನ್ನೆ ಉಜಿರೆಯ ಶ್ರೀ ಜನಾರ್ಧನ ದೇವಸ್ಥಾನದ ಬಳಿ ಕಾರು ಪಾರ್ಕ್ ಮಾಡಿ ಎದುರಿನ ರಸ್ತೆಯನ್ನು ನೋಡಿದಾಗ “ಏನಪ್ಪಾ ಇದು, ಇಲ್ಲೇನಾದ್ರೂ ಜಾತ್ರೆ ನಡೀತಾ ಇದೆಯೇನಾ?” ಅನ್ನೋ ಫೀಲಿಂಗ್ ಬಂದಿದ್ದು ಸುಳ್ಳಲ್ಲ! ಉಜಿರೆ ರೋಟರಿ ಕ್ಲಬ್, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ, ಗ್ರಾಮ ಪಂಚಾಯತ್ ಉಜಿರೆ ಹಾಗೂ ಬೆನಕ ಇವೆಂಟ್ಸ್ ಇವರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣಾನುಗ್ರಹ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಮೂರು ದಿನಗಳ ‘ಹಲಸು ಮತ್ತು ಹಣ್ಣು ಮೇಳ’ದ ಎರಡನೇ ದಿನವಂತೂ ಅಭೂತಪೂರ್ವ ಯಶಸ್ಸನ್ನು ಕಂಡಿತು.
ಕಲ್ಯಾಣ ಮಂಟಪದ ಹಾಲ್ ಗೇಟ್ ಒಳಗೆ ಪ್ರವೇಶಿಸುತ್ತಿದ್ದಂತೆ ಬಗೆಬಗೆಯ, ಅದರಲ್ಲೂ ಅಪರೂಪದ ಹೂವಿನ ಗಿಡಗಳ ಸಾಲು ಸಾಲು ಸ್ಟಾಲ್ಗಳು ಪ್ರಕೃತಿ ಪ್ರೇಮಿಗಳನ್ನು ರಂಗುರಂಗಾಗಿ ಸ್ವಾಗತಿಸುತ್ತಿದ್ದವು. ಹಾಲ್ ಒಳಗೆ ಹೆಜ್ಜೆ ಇಡುತ್ತಿದ್ದಂತೆ ಜನಸಾಗರದ ಗಲಾಟೆ, ಗದ್ದಲ! ಗ್ರಾಹಕರು ತಮಗೆ ಇಷ್ಟವಾದ ಐಟಂಗಳನ್ನು ಕೊಳ್ಳುತ್ತಾ, ಸವಿಯುತ್ತಾ ಅತ್ಯಂತ ಹರ್ಷಚಿತ್ತರಾಗಿ ಮರಳುತ್ತಿರುವುದು ಕಂಡುಬಂತು.
ಹಾಲ್ನ ಒಳಭಾಗದ ಎಡಗಡೆ ಸಾಗುತ್ತಿದ್ದಂತೆ ಶುಂಠಿ ಕಷಾಯ ಹಾಗೂ ಇತರ ಗಿಡಮೂಲಿಕೆ, ಆಯುರ್ವೇದ ವಸ್ತುಗಳನ್ನು ಸೇರಿಸಿ ತಯಾರಿಸಿದ ಕಷಾಯದ ಪುಡಿಯ ಘಮಲು ಮೂಗಿಗೆ ಬಡಿಯುತ್ತದೆ. ಅಲ್ಲಿನ ವ್ಯಾಪಾರಿಗಳು ಪ್ರೀತಿಯಿಂದ ಕರೆದು, “ಸ್ಯಾಂಪಲ್ ಕುಡಿದು ನೋಡಿ, ಇಷ್ಟವಾದರೆ ಮಾತ್ರ ಖರೀದಿ ಮಾಡಿ” ಎನ್ನುತ್ತಾ ನಲ್ಮೆಯಿಂದ ಸ್ವಾಗತ ಮಾಡಿಕೊಳ್ಳುತ್ತಿದ್ದರು. ಇದರ ಪಕ್ಕದಲ್ಲೇ ಪುಸ್ತಕ ಪ್ರಿಯರಿಗಾಗಿ ಜ್ಞಾನದ ಹಸಿವು ನೀಗಿಸುವ ಸುಂದರ ಪುಸ್ತಕಗಳ ಪ್ರಪಂಚವೇ ತೆರೆದುಕೊಂಡಿತ್ತು. ಈ ಹಲಸು ಮೇಳದಲ್ಲಿ ಇಂತಹದ್ದೊಂದು ಪುಸ್ತಕ ಸಂತೆ ಇದೆ ಎಂದು ನನಗೆ ಮೊದಲೇ ಗೊತ್ತಿರಲಿಲ್ಲ; ಒಂದುವೇಳೆ ಗೊತ್ತಿರುತ್ತಿದ್ದರೆ ನನ್ನ ಸ್ವಂತ ಕಾದಂಬರಿ ಪುಸ್ತಕಗಳನ್ನೂ (ನನ್ನ ಅಕ್ಷರ ಕೃಷಿಯನ್ನೂ) ಜನರ ಮುಂದೆ ಪ್ರದರ್ಶನಕ್ಕೆ ಇಡುತ್ತಿದ್ದೆ!
ಇನ್ನು ಹೊರಗಡೆಯ ಸ್ಟಾಲ್ ಕಡೆಗೆ ಕಣ್ಣು ಹಾಯಿಸಿದರೆ ಅಲ್ಲಿ ಶುದ್ಧ ಸಾಂಪ್ರದಾಯಿಕ ಶೈಲಿಯ ಮತ್ತೊಂದು ಅದ್ಭುತ ಪ್ರಪಂಚವೇ ತೆರೆದುಕೊಂಡಿತ್ತು! ಬೆಳ್ತಂಗಡಿಯ ಲಾಯಿಲ ಸಮೀಪದ, ಹಲವಾರು ತಲೆಮಾರುಗಳಿಂದ ತಮ್ಮ ಮೂಲ ವೃತ್ತಿಯನ್ನೇ ಅತ್ಯಂತ ಸಾಂಪ್ರದಾಯಿಕ ಶೈಲಿಯಲ್ಲಿ ಮುಂದುವರಿಸಿಕೊಂಡು ಬರುತ್ತಿರುವ ಕಮ್ಮಾರರ ಕಬ್ಬಿಣದ ವಸ್ತುಗಳ ಸ್ಟಾಲ್ ಮೇಳದ ಪ್ರಮುಖ ಆಕರ್ಷಣೆಯಾಗಿತ್ತು. ಮಾಡರ್ನ್ ಮಷಿನ್ಗಳ ಯಾವುದೇ ಹಂಗಿಲ್ಲದೆ, ಕೇವಲ ತಮ್ಮ ಕಠಿಣ ಪರಿಶ್ರಮ ಮತ್ತು ಕೈಯಾರೆ ಸಾಂಪ್ರದಾಯಿಕವಾಗಿ ಸಿದ್ಧಪಡಿಸಿದ ಕತ್ತಿ, ಚಾಕು, ಚೂರಿಗಳು, ಶುದ್ಧ ಕಬ್ಬಿಣದ (Pure Iron) ದೋಸೆ ಕಾವಲಿ, ಪಡ್ಡು ಕಾವಲಿ, ಸಟ್ಟುಗ ಹಾಗೂ ಒಗ್ಗರಣೆ ಬಾಣಲೆ ಸೇರಿದಂತೆ ಎಲ್ಲಾ ಬಗೆಯ ಗೃಹಬಳಕೆಯ ಕಬ್ಬಿಣದ ಉಪಕರಣಗಳು ಅಲ್ಲಿ ಮಾರಾಟಕ್ಕಿದ್ದವು.
ಇಲ್ಲಿ ನನಗೊಂದು ವೈಯಕ್ತಿಕವಾಗಿ ಬಹಳ ಖುಷಿಯಾದ ವಿಷಯ ಏನೆಂದರೆ, ಕಳೆದ ಧರ್ಮಸ್ಥಳದ ಲಕ್ಷದೀಪೋತ್ಸವದ ಸಂತೆಗೆ ಹೋದಾಗ ಇದೇ ವ್ಯಾಪಾರಿಗಳ ಸ್ಟಾಲ್ ನಲ್ಲಿ ಕಬ್ಬಿಣದ ಒಗ್ಗರಣೆ ಬಾಣಲೆ (ದಪ್ಪ ದೋಸೆ ಮಾಡುವ ಬಾಣಲೆ) ಒಂದನ್ನು ಖರೀದಿಸಲು ಮಿಸ್ ಮಾಡಿಕೊಂಡಿದ್ದೆ ಅನ್ನೋ ಬೇಸರ ನನಗಿತ್ತು. ಆದರೆ ನಿನ್ನೆ ಆ ಕೊರತೆಯನ್ನು ಈ ಮೇಳ ನೀಗಿಸಿತು, ಕಡೆಗೂ ಆ ಒಗ್ಗರಣೆ ಬಾಣಲೆಯನ್ನು ನಿನ್ನೆ ಇಲ್ಲಿ ಕೈಗೆತ್ತಿಕೊಂಡೇ ಬಿಟ್ಟೆ!
ಇನ್ನು ಹೆಣ್ಣು ಮಕ್ಕಳನ್ನು ಈ ಮೇಳಕ್ಕೆ ಕರೆದುಕೊಂಡು ಹೋದರೆ ಕೇಳುವುದೇ ಬೇಡ! ಬಹುಶಃ ಇಡೀ ಮೇಳದ ಸ್ಟಾಲ್ಗಳನ್ನು ವಿನ್ಯಾಸಗೊಳಿಸಿದ್ದೇ ಅವರಿಗೋಸ್ಕರವೇನೋ ಅನ್ನುವ ಫೀಲಿಂಗ್ ಅಲ್ಲಿಗೆ ಬಂದ ಪ್ರತಿಯೊಬ್ಬ ಗಂಡಸರಿಗೂ ಬಾರದಿದ್ದರೆ ಕೇಳಿ.
ಹಾಗಂತ ಗಂಡಸರನ್ನೇನು ಮೇಳ ನಿರಾಸೆಗೊಳಿಸಲಿಲ್ಲ, ಅವರಿಗಾಗಿಯೂ ಜೀನ್ಸ್ ಪ್ಯಾಂಟ್, ಶರ್ಟ್ ಸೇರಿದಂತೆ ಹತ್ತಾರು ಗೃಹಬಳಕೆಯ ಸ್ಟಾಲ್ಗಳು ಸಜ್ಜಾಗಿದ್ದವು.
ಖಾದ್ಯ ಪ್ರಿಯರಿಗಂತೂ ಇದು ಸ್ವರ್ಗವೇ ಸರಿ. “ಅಯ್ಯೋ, ನಾನು ಸುಮ್ಮನೆ ತಗೊಂಡು ಬಿಟ್ಟೆ, ಚನ್ನಾಗಿಲ್ಲದಿದ್ದರೆ ಏನು ಮಾಡುವುದು?” ಎಂಬ ಗೊಂದಲಕ್ಕೆ ಇಲ್ಲಿ ಆಸ್ಪದವೇ ಇರಲಿಲ್ಲ. ಮೊದಲು ಸ್ಯಾಂಪಲ್ ತಿಂದು ನೋಡಿ, ರುಚಿ ಇಷ್ಟವಾದರೆ ಮಾತ್ರ ಖರೀದಿಸುವ ಅದ್ಭುತ ಅವಕಾಶ ಇದ್ದಿದ್ದರಿಂದ ಯಾರೂ ಬೇಸರ ಪಡದೆ ತಮ್ಮಿಷ್ಟದ ಖಾದ್ಯಗಳನ್ನು ಅಪ್ಪಿ ಒಪ್ಪಿ ಆನಂದಿಸುತ್ತಿದ್ದರು.ವಿಶೇಷವಾಗಿ ಹಲಸಿನ ಹಣ್ಣಿನ ಐಸ್ ಕ್ರೀಮ್, ಹಲಸಿನ ಹಣ್ಣಿನ ಜಿಲೇಬಿ ಮತ್ತು ಹೋಳಿಗೆಯ ಸ್ಟಾಲ್ಗಳ ಮುಂದೆ ಜನರ ಸಾಲು ಮುಗಿಯುತ್ತಲೇ ಇರಲಿಲ್ಲ.


ಗೃಹ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಮೇಳದಲ್ಲಿ ಮನೆಯಲ್ಲೇ ತಯಾರಿಸಿದ ಹಲಸಿನ ಹಪ್ಪಳ, ಸಂಡಿಗೆ, ಬಗೆಬಗೆಯ ಉಪ್ಪಿನಕಾಯಿಗಳು ಹಾಗೂ ಪಟ್ಟಣದ ಜನರಿಗೆ ಹುಡುಕಿದರೂ ಸಿಗದ ಕೆಲವು ಅಮೂಲ್ಯ ಆರೋಗ್ಯಕರ ಸಾಂಪ್ರದಾಯಿಕ ಪದಾರ್ಥಗಳು ಲಭ್ಯವಿದ್ದವು. ಮಾರುಕಟ್ಟೆಯ ಬೆಲೆಗಿಂತ ಸ್ವಲ್ಪ ಬೆಲೆ ಹೆಚ್ಚಾಗಿದ್ದರೂ, ಸಂಪೂರ್ಣವಾಗಿ ರಾಸಾಯನಿಕ ಪದಾರ್ಥಗಳಿಂದ ಮುಕ್ತವಾಗಿದ್ದ ಈ ಶುದ್ಧ ಸ್ವದೇಶಿ ಉತ್ಪನ್ನಗಳಿಗೆ ಸ್ವಲ್ಪ ಜಾಸ್ತಿ ದುಡ್ಡು ಕೊಟ್ಟರೂ ಸಾರ್ಥಕ ಅನ್ನಿಸಿತು. ಇನ್ನೊಂದು ಹಾಲ್ನಲ್ಲಿ ಹತ್ತಾರು ಖಾರ-ಸಿಹಿ ತಿನಿಸುಗಳು, ತಂಪು ಪೇಯಗಳು, ಆಯುರ್ವೇದ ಸೋಪ್ಗಳು ಹಾಗೂ ದಿನಬಳಕೆಯ ವಸ್ತುಗಳು ಅತಿಥಿ-ಅಭ್ಯಾಗತರನ್ನು ಕೈಬೀಸಿ ಕರೆಯುತ್ತಿದ್ದವು.
ಬೆನಕ ಇವೆಂಟ್ಸ್ನವರು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದ್ದ ಈ ಮೇಳದಲ್ಲಿ ನಮ್ಮ ಹೆಮ್ಮೆಯ ಬೆನಕ ಆಸ್ಪತ್ರೆಯ ಡಾಕ್ಟರುಗಳೂ ಸಿಕ್ಕಿ, ಕುಶಲೋಪರಿ ಮಾತನಾಡಿಸಿದ್ದು ತುಂಬಾ ಖುಷಿ ತಂದಿತು. ಜೊತೆಗೆ ಅಮೆರಿಕಾದಿಂದ ಬಂದಿದ್ದ ಡಾಕ್ಟರ್ ಮೇಡಂ ಕೂಡ ಸಿಕ್ಕಿದ್ದರಿಂದ, ಮೇಳದ ಹೈಜೀನ್ (ಸ್ವಚ್ಛತೆ) ಬಗ್ಗೆ ಇನ್ನು ಯಾವುದೇ ಸಂದೇಹ ಪಡಬೇಕಾಗಿರಲಿಲ್ಲ!
ಇವೆಂಟ್ ಮ್ಯಾನೇಜ್ಮೆಂಟ್ನವರು ಎಲ್ಲೆಡೆ ಕಸದ ಬುಟ್ಟಿಗಳನ್ನು ಇಟ್ಟು ಸ್ವಚ್ಛತೆಗೆ ಆದ್ಯತೆ ನೀಡಿದ್ದರೂ, ನಮ್ಮ ನಾಡಿನ ಹೆಮ್ಮೆಯ ಕೆಲ (ಅ)ಸಭ್ಯ ನಾಗರಿಕರು ಮಾತ್ರ ಪಕ್ಕದಲ್ಲೇ ಖಾಲಿ ಕಸದ ಡಬ್ಬ ಇದ್ದರೂ, ಈಗಾಗಲೇ ತುಂಬಿ ತುಳುಕುತ್ತಾ ಕೆಳಗೆ ಬೀಳುತ್ತಿದ್ದ ಡಬ್ಬಕ್ಕೇ ಮತ್ತೆ ಮತ್ತೆ ಕಸವನ್ನು ತುಂಬಿಸುತ್ತಿದ್ದ ದೃಶ್ಯ ಸ್ವಲ್ಪ ಬೇಸರ ತರಿಸಿತು.
ನಾಗರಿಕ ಪ್ರಜ್ಞೆ ನಮ್ಮಲ್ಲಿ ಇನ್ನು ಜಾಗೃತವಾಗಬೇಕಿದೆ. ಇಂತಹ ವ್ಯಕ್ತಿಗಳಿಗಾಗಿಯೇ ಅರೋಗ್ಯ ಸ್ವಚ್ಛತೆ ಬಗ್ಗೆ ಜನರನ್ನು ಎಜುಕೇಟ್ ಮಾಡುವ ಇನ್ನೊಂದು ಸ್ಟಾಲ್ ನ ಅಗತ್ಯ ಇದೆ ಅನಿಸಿತು.
ನಮ್ಮ ‘ಸದ್ಗುರು ಆಯುರ್ವೇದ ಗಣೇಶ್ ಶೆಟ್ರು’ ಹಾಗೂ ಇತರ ಸಂಘ ಸಂಸ್ಥೆಗಳ ಒಗ್ಗೂಡುವಿಕೆಯಿಂದ ಮೂಡಿಬಂದ ಈ ಮೇಳ ಎರಡನೆಯ ದಿನವೂ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಒಟ್ಟಿನಲ್ಲಿ ಹೇಳುವುದಾದರೆ, ಅಕ್ಷರಶಃ ಚಿಕ್ಕ ಮಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಸಂತೆಯನ್ನು ಸುತ್ತಾಡಿದ ಅನುಭವ ಆಗಿದ್ದಂತೂ ಸುಳ್ಳಲ್ಲ.
ಮೂರು ದಿನಗಳ ಕಾಲ ನಡೆಯುವ ಈ ಸುಂದರ ಮೇಳಕ್ಕೆ ಇಂದು (ಭಾನುವಾರ – ಜೂನ್ 28) ಕೊನೆಯ ದಿನ. ಅಸುಪಾಸಿನಲ್ಲಿ ಇರುವವರು ಸಮಯ ಮಾಡಿಕೊಂಡು ಒಮ್ಮೆ ಭೇಟಿ ನೀಡಿ. ಕೇವಲ ಹಲಸು ‘ಪ್ರಿಯರು’ ಅಷ್ಟೇ ಅಲ್ಲ, ಅಪ್ರಿಯರೂ ಧೈರ್ಯವಾಗಿ ಹೋಗಬಹುದು, ಏಕೆಂದರೆ ನಿಮಗೂ ಇಷ್ಟವಾಗುವ ಹತ್ತಾರು ವೈವಿಧ್ಯಮಯ ವಸ್ತುಗಳು ಅಲ್ಲಿ ನಿಮಗಾಗಿ ಕಾಯುತ್ತಿವೆ!
ಮತ್ತೆ ಮೇಳ ಮುಗಿದ ಮೇಲೆ ‘ಅಯ್ಯೋ ನಾನು ಮಿಸ್ ಮಾಡ್ಕೊಂಡೆ’ ಅಂತ ಚಿಂತಿಸಿದರೆ ಏನೂ ಫಲವಿಲ್ಲ. ಟ್ರೈನ್ ಹೊರಡುವ ಮುಂಚೆಯೇ ಸ್ಟೇಷನ್ಗೆ ಬರೋದು ಜಾಣತನ ಅಲ್ವೇ? ಬನ್ನಿ, ಮೇಳದ ಸಂಭ್ರಮ ಸವಿಯಿರಿ!…✍️ ಎಂ. ಕೃಷ್ಣಪ್ರಸಾದ್ ಭಟ್ ಮದ್ದಡ್ಕ









