ಮಿಸ್ ಟೀನ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಆಫ್ ಕಿರೀಟ ಮುಡಿಗೇರಿಸಿಕೊಂಡ ಅರಸಿನಮಕ್ಕಿಯ ಸನುಷ – ಇಂಟರ್‌ನ್ಯಾಷನಲ್ ಮಟ್ಟದ ಸ್ಪರ್ಧೆಗೆ ಆಯ್ಕೆ

0

ಬೆಳ್ತಂಗಡಿ: ಪಾಥ್ ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲಾದ ಏಳನೇ ಆವೃತ್ತಿಯ ಟೀನ್ ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆಯು ಮಂಗಳೂರಿನ ಬೋಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು.

ಈ ಸ್ಪರ್ಧೆಯಲ್ಲಿ ಅರಸಿನಮಕ್ಕಿಯ ಸೌಮ್ಯ ಮತ್ತು ರಾಜನ್ ದಂಪತಿಯ ಪುತ್ರಿ ಕುಮಾರಿ ಸನುಷ ಅವರು ಮಿಸ್ ಟೀನ್ ಇಂಡಿಯಾ ಕರ್ನಾಟಕ-2026 ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಆಫ್ ಕಿರೀಟ ಮುಡಿಗೇರಿಸಿಕೊಂಡು ಮುಂದಿನ ಹಂತದ ಇಂಟರ್‌ನ್ಯಾಷನಲ್ ಲೆವೆಲ್ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಕೊಕ್ಕಡದ ಸೈಂಟ್ ಫ್ರಾನ್ಸಿಸ್ ಪಿ.ಯು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಸನುಷ, ನೃತ್ಯ, ಕ್ರೀಡೆ ಹಾಗೂ ಮಾಡೆಲಿಂಗ್ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಮಾಡೆಲಿಂಗ್ ಅವರ ನೆಚ್ಚಿನ ಹವ್ಯಾಸವಾಗಿದ್ದು, ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ರಾಜ್ಯ ಮಟ್ಟದ ಈ ಸ್ಪರ್ಧೆಯಲ್ಲಿ ಮೂರು ವಿಭಾಗಗಳಿಂದ ಒಟ್ಟು 35 ಸ್ಪರ್ಧಿಗಳು ಭಾಗವಹಿಸಿದ್ದು, ಟೀನ್ ವಿಭಾಗದಲ್ಲಿ ಸನುಷ ಅವರು ಟಾಪ್-10 ಫೈನಲಿಸ್ಟ್ ಆಗಿ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದರು. ಗ್ರ್ಯಾಂಡ್ ಫಿನಾಲೆಯಲ್ಲಿ ಟ್ರೆಡಿಷನಲ್ ರೌಂಡ್, ವೆಸ್ಟರ್ನ್ ರೌಂಡ್, ಟ್ಯಾಲೆಂಟ್ ರೌಂಡ್, ಪರಿಚಯ ಹಾಗೂ ಪ್ರಶ್ನೋತ್ತರ ಸುತ್ತುಗಳ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಈ ಎಲ್ಲ ಸುತ್ತುಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತೀರ್ಪುಗಾರರ ಮೆಚ್ಚುಗೆ ಗಳಿಸಿ ಫಸ್ಟ್ ರನ್ನರ್ ಆಫ್ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಪ್ರತಿಭಾ ಕಾರಂಜಿ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಕಾಲೇಜು ವಿಭಾಗದಲ್ಲಿ ತಾಲೂಕು ಮಟ್ಟದ ಸ್ಪೋರ್ಟ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ‘ಕಲಾ ತಿಲಕ’ ಪ್ರಶಸ್ತಿಯನ್ನು ಪಡೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.ಸೌಂದರ್ಯ ಸ್ಪರ್ಧೆಗೆ ಮಂಗಳೂರಿನ ಪ್ರಸಿದ್ಧ ಮಾಡೆಲಿಂಗ್ ತರಬೇತಿ ಸಂಸ್ಥೆ ಪಾತ್ ವೇನಲ್ಲಿ ದೀಪಕ್ ಗಂಗೂಲಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು.

ಮುಂದಿನ ದಿನಗಳಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಉತ್ತಮ ಸಾಧನೆ ಮಾಡಬೇಕೆಂಬ ಕನಸನ್ನು ಹೊಂದಿರುವ ಸನುಷ ಅವರ ಜೀವನದ ಪ್ರಮುಖ ಗುರಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದು ಆಗಿದೆ. ದೇಶಸೇವೆಯ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಸಾಧನೆ ಮಾಡಿ ಯುವಜನತೆಗೆ ಮಾದರಿಯಾಗಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಇವರ ಸಾಧನೆಗೆ ಪೋಷಕರು, ಶಿಕ್ಷಕರು, ಸ್ನೇಹಿತರು ಹಾಗೂ ಊರಿನ ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ಹಲವು ಸವಾಲುಗಳಲ್ಲಿ ಗೆದ್ದಿದ್ದಾಳೆ

ನಮ್ಮ ಮಗಳ ಈ ಸಾಧನೆಗೆ ನಮಗೆ ತುಂಬಾ ಹೆಮ್ಮೆ ಇದೆ. ನಾವು ಹಳ್ಳಿಯಲ್ಲಿ ವಾಸಿಸುವ ಸಾಮಾನ್ಯ ಕುಟುಂಬವಾಗಿದ್ದು, ಯಾವುದೇ ಹಣಬಲ ಇಲ್ಲ. ಸನುಷ ತನ್ನ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಛಲದಿಂದಲೇ ಈ ಮಟ್ಟದ ಸಾಧನೆ ಮಾಡಿದ್ದಾಳೆ. ಹಲವು ಸವಾಲುಗಳ ನಡುವೆಯೂ ಸ್ಪರ್ಧೆಯಲ್ಲಿ ಭಾಗವಹಿಸಿ ಫಸ್ಟ್ ರನ್ನರ್ ಆಫ್ ಆಗಿರುವುದು ನಮಗೆ ಸಂತಸ ತಂದಿದೆ. ಮುಂದಿನ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸುತ್ತೇವೆ– ಸೌಮ್ಯ ಸನುಷ ತಾಯಿ

ಸನುಷ ಅವರ ಸಾಧನೆ ಅವರ ಕಠಿಣ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದ ಫಲವಾಗಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದರೂ ದೊಡ್ಡ ಕನಸು ಕಂಡು ಅದನ್ನು ನನಸಾಗಿಸಲು ಅವರು ನಿರಂತರವಾಗಿ ಶ್ರಮಿಸಿದ್ದಾರೆ. ಆರ್ಥಿಕ ಹಾಗೂ ಇತರ ಸವಾಲುಗಳ ನಡುವೆಯೂ ಹಿಂಜರಿಯದೆ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ. ಮುಂದಿನ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡಿ ದೇಶಕ್ಕೆ ಹಾಗೂ ನಮ್ಮ ಪ್ರದೇಶಕ್ಕೆ ಹೆಮ್ಮೆ ತರುತ್ತಾರೆ ಎಂಬ ವಿಶ್ವಾಸವಿದೆ.

:- ಬಾಲಕೃಷ್ಣ ನೈಮಿಷ ಮಾಲಕರು ನೈಮಿಷ ವೆಂಚರ್ಸ್ ಸೌತಡ್ಕ

LEAVE A REPLY

Please enter your comment!
Please enter your name here