ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ

0

ಲಾಯಿಲ: ಗ್ರಾಮೀಣ ಭಾಗದ ಸಾಂಪ್ರದಾಯಿಕ ತಿಪ್ಪೆಗಳಲ್ಲಿ ಕೃಷಿ ತ್ಯಾಜ್ಯದ ಜೊತೆಗೆ ಪ್ಲಾಸ್ಟಿಕ್ ಸೇರುತ್ತಿರುವುದು ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಈ ಗಂಭೀರ ಸಮಸ್ಯೆಯನ್ನು ಮನಗಂಡು, ಹಳ್ಳಿಗಳನ್ನು ಕಸ ಹಾಗೂ ಪ್ಲಾಸ್ಟಿಕ್ ಮುಕ್ತಗೊಳಿಸುವ ಉದ್ದೇಶದಿಂದ ಜೂನ್ 12 ರಿಂದ ಜೂನ್ 26 ರವರೆಗೆ ಎರಡು ವಾರಗಳ ಕಾಲ ಹಮ್ಮಿಕೊಳ್ಳಲಾದ ವಿಶೇಷ ಸ್ವಚ್ಛತಾ ಅಭಿಯಾನವು ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಜರುಗಿತು.

ಅಭಿಯಾನದ ಅಂಗವಾಗಿ ಜೂನ್ 24 ರಂದು ಲಾಯಿಲ ಗ್ರಾಮದ ‘ಭಾರತ್ ಮಾತಾ ಸಭಾ ಭವನ’ದಲ್ಲಿ ವಿಶೇಷ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ನಿರ್ಮೂಲನೆ ಮಾಡುವ ಕುರಿತು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮಮಾಹಿತಿ ಕಾರ್ಯಕ್ರಮದ ನಂತರ ಲಾಯಿಲ ಜಂಕ್ಷನ್ ಬಳಿಯಿಂದ ರಸ್ತೆ ಬದಿಯ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ರಸ್ತೆ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಇನ್ನಿತರ ಅಜೈವಿಕ ಕಸವನ್ನು ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಸೇರಿ ಯಶಸ್ವಿಯಾಗಿ ವಿಲೇವಾರಿ ಮಾಡಿದರು.

ಸಾರ್ವಜನಿಕ ಹಿತಚಿಂತನೆಯ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO), ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಪಂಚಾಯತ್ ಸ್ವಚ್ಛತಾ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮ ಪಂಚಾಯತ್‌ನ ಸಮಸ್ತ ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here