ಸೈಂಟ್ ಪೀಟರ್ ಕ್ಲೇವರ್ ಶಾಲೆಯಲ್ಲಿ ನೂತನ ಶಾಲಾ ಮಂತ್ರಿಮಂಡಲ ಉದ್ಘಾಟನೆ

0

ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ನೂತನ ಶಾಲಾ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭವು ಜೂನ್ 17 ರಂದು ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ಫಾ. ಎಲಿಯಾಸ್ ಡಿಸೋಜಾ ಅವರು ನೂತನವಾಗಿ ಆಯ್ಕೆಯಾದ ಶಾಲಾ ನಾಯಕರು ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, “ನಾಯಕತ್ವ ಎಂಬುದು ಕೇವಲ ಅಧಿಕಾರವಲ್ಲ, ಅದೊಂದು ದೊಡ್ಡ ಜವಾಬ್ದಾರಿ. ವಿದ್ಯಾರ್ಥಿ ನಾಯಕರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಶಾಲೆಯ ಶಿಸ್ತು ಮತ್ತು ಅಭಿವೃದ್ಧಿಗೆ ಶ್ರಮಿಸಬೇಕು” ಎಂದು ಶುಭ ಹಾರೈಸಿದರು.

ಸಿ.ಆರ್.ಪಿ.ಎಫ್ ಸೈನಿಕನಿಗೆ ಸನ್ಮಾನ:ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ವೀರ ಯೋಧ ಶ್ರೀ ಮಂಜಪ್ಪ ಎಲ್. ಅವರು ಭಾಗವಹಿಸಿದ್ದರು. ದೇಶ ಸೇವೆಯ ತಮ್ಮ ಸೈನಿಕ ಜೀವನದ ರೋಮಾಂಚಕ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು, ಜೀವನದಲ್ಲಿ ಶಿಸ್ತು, ಜವಾಬ್ದಾರಿ, ನಾಯಕತ್ವದ ಗುಣಗಳು ಹಾಗೂ ಸೇವಾ ಮನೋಭಾವ ಎಷ್ಟು ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಮಂಜಪ್ಪ ಎಲ್. ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮೋಳಿ ಇಲ್ಲಿಕ್ಕ್ಯಲ್ ಅವರು ನೂತನ ಮಂತ್ರಿಮಂಡಲದ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ನೂತನ ಪದಾಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸುವುದಾಗಿ ಈ ವೇಳೆ ಪ್ರತಿಜ್ಞೆ ಸ್ವೀಕರಿಸಿದರು.ಸಮಾರಂಭದಲ್ಲಿ ಸಿಸ್ಟರ್ ಪರಿಮಳಾ ಎಲ್ಲರನ್ನೂ ಸ್ವಾಗತಿಸಿದರು. ಕವಿತಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ವಿಶಾಲಾಕ್ಷಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮತ್ತು ಸಕಲ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಚಂದವನ್ನು ಹೆಚ್ಚಿಸಿದರು.

LEAVE A REPLY

Please enter your comment!
Please enter your name here