






ಶಿಶಿಲ: ಗ್ರಾಮ ಪಂಚಾಯತ್ನ ದ್ವಿತೀಯ ಹಂತದ ಗ್ರಾಮಸಭೆಯಲ್ಲಿ ಅಕ್ರಮ-ಸಕ್ರಮ ಅರ್ಜಿಗಳ ವಿಲೇವಾರಿ ಆಗದಿರುವ ವಿಚಾರ ಪ್ರಮುಖ ಚರ್ಚೆಗೆ ಗ್ರಾಸವಾಯಿತು.

ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗೆ (ವಿ.ಎ.) ಮನವಿ ಸಲ್ಲಿಸಿ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕರುಣಾಕರ ಶಿಶಿಲ, “ಶಿಶಿಲ ಗ್ರಾಮದಲ್ಲಿ ಸಲ್ಲಿಕೆಯಾಗಿರುವ ಅಕ್ರಮ-ಸಕ್ರಮ ಅರ್ಜಿಗಳ ಪೈಕಿ ಒಂದೇ ಒಂದು ಅರ್ಜಿಯೂ ವಿಲೇವಾರಿಯಾಗಿಲ್ಲ. ಅರ್ಜಿಗಳ ಪರಿಶೀಲನೆ ಹಾಗೂ ವಿಲೇವಾರಿಗೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಸಭೆಯಲ್ಲಿ ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆಯ ಅಧಿಕಾರಿ ವಿಜೇತ್, “ನಾನು ಹೊಸದಾಗಿ ಇಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಪ್ರಸ್ತುತ ಮೇಲಧಿಕಾರಿಗಳ ನಿರ್ದೇಶನದಂತೆ ಪೌತಿ ಖಾತೆ ಸಂಬಂಧಿತ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆ ಕೆಲಸ ಪೂರ್ಣಗೊಂಡ ಬಳಿಕ ಅಕ್ರಮ-ಸಕ್ರಮ ಅರ್ಜಿಗಳ ಪರಿಶೀಲನೆ ಆರಂಭಿಸಿ, ಆಪ್ನಲ್ಲಿ ದಾಖಲಾಗಿರುವ ಅರ್ಜಿಗಳನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡಿ ಅಕ್ರಮ-ಸಕ್ರಮ ಸಿಟ್ಟಿಂಗ್ ಕಮಿಟಿಗೆ ಕಳುಹಿಸಲಾಗುವುದು” ಎಂದು ಭರವಸೆ ನೀಡಿದರು.


ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ ಮಾತನಾಡಿ, “ನಮ್ಮ ಗ್ರಾಮದಲ್ಲಿ ಮೂರು ತಿಂಗಳಿಗೊಮ್ಮೆ ಗ್ರಾಮ ಆಡಳಿತ ಅಧಿಕಾರಿ ಬದಲಾಗುತ್ತಿರುವುದರಿಂದ ಅಕ್ರಮ-ಸಕ್ರಮ ಸೇರಿದಂತೆ ಅನೇಕ ಕೆಲಸಗಳು ಬಾಕಿ ಉಳಿದಿವೆ. ಇನ್ನೂ ಮೂರು ತಿಂಗಳೊಳಗೆ ಈ ಅರ್ಜಿಗಳ ವಿಲೇವಾರಿ ಆಗದಿದ್ದರೆ ಗ್ರಾಮಸ್ಥರೆಲ್ಲರೂ ಸೇರಿ ತಹಸೀಲ್ದಾರ್ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಿ ಧರಣಿ ಹಮ್ಮಿಕೊಳ್ಳುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಜೂನ್ 4ರಂದು ಪಂಚಾಯತ್ ಸಭಾಭವನದಲ್ಲಿ ನಡೆದ ದ್ವಿತೀಯ ಹಂತದ ಗ್ರಾಮಸಭೆಯು ಆಡಳಿತಾಧಿಕಾರಿ ಭರತ್ ಕುಮಾರ್ ಎಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೋಡಲ್ ಅಧಿಕಾರಿಯಾಗಿ ಹೇಮಲತಾ ಚಂದ್ರಶೇಖರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿ ಸುಂದರ ಎಂ.ಕೆ. ವಾರ್ಷಿಕ ವರದಿಯನ್ನು ಮಂಡಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ ಸ್ವಾಗತಿಸಿ, ವಂದಿಸಿದರು.









