ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಶಿಬಿರಕ್ಕೆ ಚಾಲನೆ

0

ಬೆಳ್ತಂಗಡಿ: ಸ್ಥಳೀಯ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ ಮತ್ತು ಬುಲ್-ಬುಲ್ ಘಟಕಗಳ 2025-26ನೇ ಸಾಲಿನ ವಾರ್ಷಿಕ ಶಿಬಿರವು ಏ.15 ರಂದು ಉದ್ಘಾಟನೆಗೊಂಡಿತು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ. ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸೇವಾ ಮನೋಭಾವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ,” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಅವರು ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಇಂತಹ ಶಿಬಿರಗಳಿಗೆ ಸಂಸ್ಥೆಯು ಸದಾ ಪ್ರೋತ್ಸಾಹ ನೀಡಲಿದೆ ಎಂದರು.

ವೇದಿಕೆಯಲ್ಲಿ ವಾಣಿ ಶಿಕ್ಷಣ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಕೆ. ಎಂ ಶ್ರೀನಾಥ್, ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ, ಸಂಸ್ಥೆಯ ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಲಕ್ಷ್ಮೀನಾರಾಯಣ ಕೆ. ಹಾಗೂ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಸುಹಾಸಿನಿ ಎ. ಉಪಸ್ಥಿತರಿದ್ದರು.ಗೈಡ್ ಕ್ಯಾಪ್ಟನ್ ಸುಮಲತಾ ಎ. ಸ್ವಾಗತಿಸಿ, ವಂದಿಸಿದರು. ವಿದ್ಯಾರ್ಥಿಗಳಾದ ಕು| ಅಂಜನಾ ಕೆ. ಮತ್ತು ಮಾ| ನಿಶಾನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here