






ಮಚ್ಚಿನ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರಗಳಲ್ಲಿ ಒಂದಾದ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಏ.6 ರಂದು ವೈಭವದಿಂದ ತೆರೆ ಕಂಡಿತು.
ಮಾರ್ಚ್ 29ರಿಂದ ಏಪ್ರಿಲ್ 6ರವರೆಗೆ ನಡೆದ ಈ ಧಾರ್ಮಿಕ ಮಹೋತ್ಸವವು ಯಾವುದೇ ಸಭಾ ಕಾರ್ಯಕ್ರಮಗಳ ಅಬ್ಬರವಿಲ್ಲದೆ, ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಒತ್ತು ನೀಡುವ ಮೂಲಕ “ಮಾದರಿ ಬ್ರಹ್ಮಕಲಶ” ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಶ್ಲಾಘನೆ :ಬ್ರಹ್ಮಕಲಶೋತ್ಸವದ ಸಮಾರೋಪದಂದು ಕ್ಷೇತ್ರಕ್ಕೆ ಭೇಟಿ ನೀಡಿದ ಧರ್ಮಸ್ಥಳದ ಶ್ರೀ ಹರ್ಷೇಂದ್ರ ಕುಮಾರ್ ಅವರು, ದೇವಸ್ಥಾನದ ಶಿಸ್ತುಬದ್ಧ ಆಚರಣೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಆದ್ಯತೆ ನೀಡಿ, ಪಾರಂಪರಿಕ ಶೈಲಿಯಲ್ಲಿ ಬ್ರಹ್ಮಕಲಶ ನೆರವೇರಿಸಿರುವುದು ಇತರ ಕ್ಷೇತ್ರಗಳಿಗೆ ಮಾದರಿ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.


ಕೊನೆಯ ದಿನವಾದ ಏಪ್ರಿಲ್ 6ರಂದು ದ್ವಾದಶನಾರಿಕೇಲ ಮಂಗಳಗಣಯಾಗ, ಪಂಚವಿಂಶತಿ ಸಂಪ್ರೋಕ್ಷಣಾ ಕಲಶಾಭಿಷೇಕ, ಮಹಾಪೂಜೆ ಮತ್ತು ಮಹಾಮಂತ್ರಾಕ್ಷತೆ ವಿತರಣೆ ನಡೆಯಿತು. ರಾತ್ರಿ ನಡೆದ ಭವ್ಯ ರಂಗಪೂಜೆಯೊಂದಿಗೆ ಈ ಐತಿಹಾಸಿಕ ಬ್ರಹ್ಮಕಲಶೋತ್ಸವಕ್ಕೆ ಅಧಿಕೃತವಾಗಿ ತೆರೆ ಬಿದ್ದಿತು.ಉಡುಪಿ ಎಸ್.ಎಂ.ಎಸ್.ಪಿ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಧಾರ್ಮಿಕ ಕಾರ್ಯಕ್ರಮಗಳ ನಂತರ ಮಂಜೇಶ್ವರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ‘ಜೈ ಭಜರಂಗ ಬಲಿ’ ಎಂಬ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡು ಭಕ್ತಾದಿಗಳ ಮನರಂಜಿಸಿತು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಎಂ. ಹರ್ಷ ಸಂಪಿಗೆತ್ತಾಯ, ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ವಸಂತ ಮರಕಡ ಸೇರಿದಂತೆ ಹಲವು ಗಣ್ಯರು ಮತ್ತು ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.









