







ಗೇರುಕಟ್ಟೆ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆದಿಲ ಗ್ರಾಮದ ಸತ್ತಿಕಲ್ಲು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪರಪ್ಪು ಮಸೀದಿ ಅಧ್ಯಕ್ಷರಾದ ಹನೀಫ್ ಮಿಸ್ಬಾಹಿ ಮತ್ತು ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಏಪ್ರಿಲ್ 05 ರಂದು ಮಧ್ಯಾಹ್ನ 12:30 ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸುನ್ನೀ ವಿದ್ಯಾಭ್ಯಾಸ ಬೋರ್ಡ್‌ನ ಮುಪತ್ತಿಸ್ ಹಾಗೂ ಎಸ್‌ಜೆಎಂ ರಾಜ್ಯ ಉಪಾಧ್ಯಕ್ಷರೂ ಆಗಿರುವ ಹಾಫಿಳ್ ಮುಹಮ್ಮದ್ ಹನೀಫ್ ಮಿಸ್ಬಾಹಿ ಅವರು ಪತ್ನಿಯೊಂದಿಗೆ ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಬೈಕ್‌ನಲ್ಲಿ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದರು.ಈ ವೇಳೆ ಸತ್ತಿಕಲ್ಲು ಎಂಬಲ್ಲಿ ಹಿಂದಿನಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರು ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದಂಪತಿ ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಪಡೀಲ್‌ನಲ್ಲಿರುವ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಂಪತಿ ಚೇತರಿಸಿಕೊಳ್ಳುತ್ತಿದ್ದಾರೆ. ಎಂದು ತಿಳಿದುಬಂದಿದೆ.


ವಿಷಯ ತಿಳಿಯುತ್ತಿದ್ದಂತೆ ಪರಪ್ಪು ಮಸೀದಿ ಆಡಳಿತ ಸಮಿತಿಯ ಹಾಲಿ ಮತ್ತು ಮಾಜಿ ಸದಸ್ಯರು, ಧಾರ್ಮಿಕ ಮುಖಂಡರು ಹಾಗೂ ಕುಟುಂಬಸ್ಥರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಅಪಘಾತದ ಸಮಯದಲ್ಲಿ ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ ಅವರು ಪುತ್ತೂರು ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.









