ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಟಿ. ಕೃಷ್ಣಮೂರ್ತಿಯವರ ‘ಪರಿವರ್ತನೆ’ ಹಾಗೂ ‘ಕಸ ಪುರಾಣ’ ಕೃತಿಗಳ ಲೋಕಾರ್ಪಣೆ

0

ಸ್ಪರ್ಶ ಕಲಾಮಂದಿರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಖ್ಯಾತ ಲೇಖಕ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿದಾರ ಡಾ. ಟಿ. ಕೃಷ್ಣಮೂರ್ತಿಯವರ ‘ಪರಿವರ್ತನೆ’ ಹಾಗೂ ‘ಕಸ ಪುರಾಣ’ ಎಂಬ ಎರಡು ಬೀದಿ ನಾಟಕಗಳ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಎಂ. ಪಿ ಶ್ರೀನಾಥ್ ಅವರ ನೇತೃತ್ವದಲ್ಲಿ ಹಾಗೂ ಚಿದಂಬರ ಬೈಕಂಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ, ವಿಶ್ರಾಂತ ಕುಲಪತಿಗಳಾದ ಡಾ. ಚಿನ್ನಪ್ಪ ಗೌಡರು ಈ ಕೃತಿಗಳನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.

ಡಾ. ಟಿ. ಕೃಷ್ಣಮೂರ್ತಿಯವರು ರಚಿಸಿರುವ ಈ ಬೀದಿ ನಾಟಕಗಳು ಈಗಾಗಲೇ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDM) ಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕರಿಂದ ತಾಲೂಕಿನಾದ್ಯಂತ ಹಲವಾರು ಪ್ರದರ್ಶನಗಳನ್ನು ಕಂಡು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿವೆ. ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ನಾಟಕಗಳು ಪ್ರಮುಖ ಪಾತ್ರ ವಹಿಸಿವೆ.

ಉಜಿರೆಯ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲರಾದ ಡಾ. ಟಿ. ಕೃಷ್ಣಮೂರ್ತಿಯವರು ಈಗಾಗಲೇ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾದ ‘ವಿದ್ಯಾರ್ಥಿ ಮಾರ್ಗದರ್ಶಿ’, ‘ಪರೀಕ್ಷಾ ಭಯ ನಿವಾರಣೆ’ ಮತ್ತು ‘ವಿದ್ಯಾರ್ಥಿ-ಪೋಷಕ-ಶಿಕ್ಷಕ ವಿಜಯಪಥ’ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಅಲ್ಲದೆ ‘ಮನೆ ಮನೆ ಕಥೆ’ ಎಂಬ ನಾಟಕ ಕೃತಿಯನ್ನೂ ಬರೆದಿದ್ದಾರೆ. ಇವರು ಮಂಗಳೂರು ಆಕಾಶವಾಣಿಯ ನಾಟಕ ವಿಭಾಗದ ಕಲಾವಿದರಾಗಿಯೂ ಸೇವೆ ಸಲ್ಲಿಸುತ್ತಿದ್ದು, ರಾಷ್ಟ್ರಮಟ್ಟದ ವ್ಯಕ್ತಿತ್ವ ವಿಕಸನ ತರಬೇತಿದಾರರಾಗಿ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here