







ಬೆಳ್ತಂಗಡಿ : ರಾಜ್ಯದಲ್ಲಿ ವಿಶ್ವವಿದ್ಯಾನಿಲಯಗಳು ನೀಡುವ ಗೌರವ ಡಾಕ್ಟರೇಟ್ ಪದವಿಯ ಘನತೆಯನ್ನು ಉಳಿಸಲು ಸರ್ಕಾರ ತೆಗೆದುಕೊಂಡ ಕ್ರಮವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸ್ವಾಗತಿಸುತ್ತದೆ.ಇತ್ತೀಚಿನ ಬೆಳವಣಿಗೆಯಲ್ಲಿ ಕೆಲ ವ್ಯಕ್ತಿಗಳಿಗೆ ಅನೇಕ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿರುವುದು ಹಾಗೂ ಗೌರವ ಡಾಕ್ಟರೇಟ್ ಪದವಿಯನ್ನು ಮಾರಾಟ ಮಾಡುವ ವಿಷಯಗಳ ಬಗ್ಗೆಯೂ ಅನೇಕ ಅನುಮಾನಗಳು ಇತ್ತೀಚಿನ ದಿನಗಳಲ್ಲಿ ಕಂಡು ಬಂದಿದೆ.


ಅನೇಕ ಉದ್ಯಮಿಗಳಿಗೆ, ಬಿಲ್ಡರ್ಗಳಿಗೆ ಮತ್ತು ಶಿಕ್ಷಣ ಕ್ಷೇತ್ರದ ಸಂಬಂಧವೇ ಇಲ್ಲದ ವ್ಯಕ್ತಿಗಳಿಗೆ ನೀಡುವುದರಿಂದ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆಯಿರುವುದನ್ನು ಎತ್ತಿ ತೋರಿಸುತ್ತದೆ. ಇದು ಉನ್ನತ ಶಿಕ್ಷಣ ವ್ಯವಸ್ಥೆಯ ಗೌರವಕ್ಕೆ ಧಕ್ಕೆಯನ್ನು ಉಂಟುಮಾಡುವಂತಹ ವಿಷಯವಾಗಿದೆ.ಗೌರವ ಡಾಕ್ಟರೇಟ್ ಪದವಿಯು ಕೇವಲ ಪ್ರಶಸ್ತಿ ಅಲ್ಲ, ಅದು ಸಮಾಜದ ಮುಂದೆ ಒಬ್ಬರ ಸಾಧನೆಗೆ ನೀಡುವ ಅತ್ಯುನ್ನತ ಮಾನ್ಯತೆ. ಆದ್ದರಿಂದ, ಈ ಪದವಿಯನ್ನು ನೀಡುವಾಗ ಕಠಿಣ ಮಾನದಂಡಗಳು, ಅರ್ಹತೆ ಮತ್ತು ನೈತಿಕತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಮುಖ್ಯವಾಗಿ ಯಾವುದೇ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ನೀಡುವ ಸಂದರ್ಭದಲ್ಲಿ ಆ ವ್ಯಕ್ತಿಯು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಅನನ್ಯ ಕೊಡುಗೆಯನ್ನು ಮಾನದಂಡವಾಗಿ ಬಳಸಿಕೊಳ್ಳಬೇಕು.
ರಾಜ್ಯ ಸರ್ಕಾರವು ಈ ವಿಷಯದಲ್ಲಿ ಗಂಭೀರವಾಗಿ ಕ್ರಮ ಕೈಗೊಂಡು, ಭವಿಷ್ಯದಲ್ಲಿ ಇಂತಹ ಅನಿಯಮಿತತೆಗಳು ನಡೆಯದಂತೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ABVP ಆಗ್ರಹಿಸುತ್ತದೆ.ವಿದ್ಯಾರ್ಥಿ ಸಮುದಾಯದ ನಂಬಿಕೆಯನ್ನು ಉಳಿಸಲು ಹಾಗೂ ವಿಶ್ವವಿದ್ಯಾಲಯಗಳ ಗೌರವವನ್ನು ಕಾಪಾಡಲು ಈ ಕ್ರಮಗಳು ಅತ್ಯಗತ್ಯವಾಗಿದೆ ಎಂದು ಪರಿಷತ್ ಅಭಿಪ್ರಾಯಪಡುತ್ತದೆ.









