







ಬೆಳ್ತಂಗಡಿ: ತಾಲೂಕು ಪಂಚಾಯತ್ನಲ್ಲಿ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಿ. ಪ್ರಶಾಂತ್ ಬಳಂಜ ಅವರು ಮಾ.30ರಂದು ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. 1-07-1987 ರಲ್ಲಿ ಪಂಚಾಯತಿಯ ಗುಮಾಸ್ತನಾಗಿ ಸರಕಾರಿ ಸೇವೆಗೆ ಪಾದಾರ್ಪಣೆ ಮಾಡಿದ ಪ್ರಶಾಂತ್ ಬಳಂಜ ಅವರು 1998ರಲ್ಲಿ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿ ಬೆಳಾಲು ಗ್ರಾಮ ಪಂಚಾಯತ್ನಲ್ಲಿ ಕಾರ್ಯ ನಿರ್ವಹಿಸಿ ನಂತರ ಮರೋಡಿ, ಬಳಂಜ, ಶಿಶಿಲ ಗ್ರಾಮ ಪಂಚಾಯತಿಗಳಲ್ಲಿ ಸೇವೆ ಸಲ್ಲಿಸಿದ್ದರು.
2013ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಭಡ್ತಿ ಹೊಂದಿ ನಾರಾವಿ, ಸರಪಾಡಿ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸಿದ್ದ ಇವರು 2009ರಿಂದ 2016ರ ತನಕ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಅವರ ಆಪ್ತ ಸಹಾಯಕನಾಗಿ ಕರ್ತವ್ಯ ನಿರ್ವಹಿಸಿದ್ದರು. 2018ರಿಂದ 2021ರವರೆಗೆ ಬಂಟ್ವಾಳ ತಾಲೂಕು ಪಂಚಾಯತಿಯಲ್ಲಿ ಸಹಾಯಕ ನಿರ್ದೇಶಕ ಮತ್ತು ಸಹಾಯಕ ಲೆಕ್ಕಾಧಿಕಾರಿಯಾಗಿ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪ್ರಶಾಂತ್ ಅವರು 2021ರಿಂದ ಬೆಳ್ತಂಗಡಿ ತಾಲೂಕು ಪಂಚಾಯತ್ ಅಧೀಕ್ಷಕರಾಗಿ ಮತ್ತು ಪ್ರಭಾರ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.


38 ವರ್ಷ 9 ತಿಂಗಳು ಸರಕಾರಿ ಸೇವೆ ಸಲ್ಲಿಸಿ ಮಾ.30ರಂದು ಸೇವಾ ನಿವೃತ್ತಿ ಹೊಂದಲಿರುವ ಇವರು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಗೌರವ ವರದಿಗಾರರಾಗಿ, ದೀಪಾವಳಿ ಸಂಚಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಉದಯವಾಣಿ, ಮುಂಗಾರು, ವಿಜಯ ಕರ್ನಾಟಕ, ಸುದ್ದಿ ಬಿಡುಗಡೆ, ಸುಧಾ ಪತ್ರಿಕೆಯಲ್ಲಿ ಪ್ರಶಾಂತ್ ಅವರ ಹಲವಾರು ಲೇಖನ ಮತ್ತು ವರದಿಗಳು ಪ್ರಕಟವಾಗಿದೆ. ವಿದ್ಯಾರ್ಥಿ ದಿಸೆಯಲ್ಲೇ ಬಳಂಜ ಗ್ರಾಮದ ಯುವಕ ಮಂಡಲದ ಅಧ್ಯಕ್ಷರಾಗಿ, ಶ್ರೀ ಪಂಚಲಿಂಗೇಶ್ವರ ದೇವಾಲಯದ ಉತ್ಸವ ಸಮಿತಿಯ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸಿದ್ದರು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದಿರುವ ಇವರು ಕೆ. ಅನಂತರಾಜ ಹೆಗ್ಡೆ ಮತ್ತು ಶಾರದಮ್ಮ ದಂಪತಿಯ ಪುತ್ರ. ಮೂಲತಃ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದವರಾದ ಇವರು ಪತ್ನಿ ಪ್ರಮೀಳ ಮತ್ತು ಪುತ್ರಿ ಡಾ. ಪ್ರಶಂಸಾ ಅವರೊಂದಿಗೆ ಬಳಂಜದಲ್ಲಿ ನೆಲೆಸಿದ್ದಾರೆ.









