






ಧರ್ಮಸ್ಥಳ : ದಕ್ಷಿಣದ ಅಯೋಧ್ಯೆಯೆಂದೇ ಕರೆಯಲ್ಪಡುವ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್, ನಿತ್ಯಾನಂದ ನಗರದಲ್ಲಿ ಮಾ. 20ರಿಂದ ಮಾ. 27ವರೆಗೆ 66ನೇ ವರ್ಷದ ಶ್ರೀ ರಾಮ ನಾಮ ತಾರಕ ಮಂತ್ರ ಸಪ್ತಾಹ ಸಮಾರಂಭ ಹಾಗೂ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾಬ್ರಹ್ಮ ರಥೋತ್ಸವವು ಬಹಳ ವಿಜೃಂಭನೆಯಿಂದ ಶ್ರೀ ಕ್ಷೇತ್ರದಲ್ಲಿ ನಡೆಯಲಿರುವುದು.ಎಂದು ಕ್ಷೇತ್ರದ ಮಠಾಧೀಶ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಿಳಿಸಿದ್ದಾರೆ.
ಕ್ಷೇತ್ರದ ನಿರ್ಮಾತೃ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ತಾರಕ ಮಂತ್ರವನ್ನು ಈ ಪುಣ್ಯ ಕ್ಷೇತ್ರದಲ್ಲಿ ಪಠಿಸಲು ಪ್ರಾರಂಭಿಸಿ ಸುಮಾರು 66 ವರ್ಷಗಳೇ ಆಗಿದೆ.


ರಾಜ್ಯದ ಯಾವುದೇ ಮೂಲೆಯಲ್ಲಿ ಕಂಡು ಕೇಳರಿಯದ ಈ 7 ದಿನಗಳ ಆಹೋರಾತ್ರಿ ನಡೆಯುವ ಭಜನೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಭಜನಾ ತಂಡಗಳು ಬಂದು ಭಜನಾ ಸಪ್ತಾಹದಲ್ಲಿ ಭಾಗವಹಿಸಿ ಧನ್ಯತೆಯನ್ನು ಪಡೆಯುತ್ತಾರೆ.ವರ್ಷಂಪ್ರತಿಯಂತೆ ಈ ವರ್ಷವೂ ಮಾ.20 ರಂದು ಬೆಳಗ್ಗೆ 9.30 ಗಂಟೆಗೆ ಶ್ರೀ ರಾಮ ನಾಮ ಸಪ್ತಾಹದ ಅಖಂಡ ನಂದಾ ದೀಪವನ್ನು ಬೆಳಗಿಸುವ ಮುಖೇನ ಜಾತ್ರೋತ್ಸವದ ಉದ್ಘಾಟನೆ ನಡೆಯಲಿರುವುದು.
ಹಾಗೂ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ತಾರಕ ಮಂತ್ರದ ನಾಮೋಚ್ಛಾರಣೆ ಸಮಾರಂಭದಲ್ಲಿ ಬೆಳ್ತಂಗಡಿ ಕ್ಷೇತ್ರದ ಗೌರವಾನ್ವಿತ ಶಾಸಕರು, ಮಂಗಳೂರು ಲೋಕಸಭಾ ಕ್ಷೇತ್ರದ ಗೌರವಾನ್ವಿತ ಸಂಸದರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ಬಹುತೇಕ ಸಚಿವರುಗಳು, ಮಾಜಿ ಸಚಿವರುಗಳು,ಜಿಲ್ಲೆಯ ಎಲ್ಲಾ ಮಾಜಿ ಶಾಸಕರುಗಳು, ಶ್ರೀ ಕ್ಷೇತ್ರದ ಎಲ್ಲಾ ಗೌರವಾನ್ವಿತ ಟ್ರಸ್ಟಿಗಳು, ಅಭಿವೃದ್ಧಿ ಸಮಿತಿ ಸದಸ್ಯರುಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿರುವರು.
ಈ ಜಾತ್ರೋತ್ಸವದಲ್ಲಿ ದಿನಂಪ್ರತಿ ಕ್ಷೇತ್ರದಲ್ಲಿ ಆರಾಧಿಸಲ್ಪಡುವ ಎಲ್ಲಾ ಪರಿವಾರ ದೇವರುಗಳ ಬಲಿ ಉತ್ಸವಗಳು ಹಾಗೂ ಚಂದ್ರಮಂಡಲ ರಥ, ಪಷ್ಪರಥ, ಬೆಳ್ಳಿರಥ, ಹನುಮಾನ್ ರಥೋತ್ಸವಗಳು ನಡೆಯಲಿದ್ದು ಮಾ.27ರಂದು ಸಾಯಂಕಾಲ 6-00 ಗಂಟೆಯಿಂದ ಕ್ಷೇತ್ರದಲ್ಲಿ ದೇವರ ಪಾಲಕಿ ಬಲಿ ಉತ್ಸವ, ಬ್ರಹ್ಮ ರಥೋತ್ಸವ ಹಾಗೂ ರಕ್ತಶ್ವರಿ, ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿರುವುದುಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









