







ಉಜಿರೆ,ದಿ.ಮಾ.14 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅರಿವು ಮೂಡಿಸಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಹೊಸನಾಲೆ ಕಾಫಿತೋಟಕ್ಕೆ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕ್ಷೇತ್ರ ಭೇಟಿ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಸತೀಶ್ ಬಿ. ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಮಹತ್ವ ಹಾಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಬಳಿಕ ಸಂಸ್ಥೆಯ ಅಧಿಕಾರಿಗಳಾದ ಗುರುದತ್ತ , ಶ್ರೀಪಾಲ್ ಎಲ್. ಜೈನ್ ಹಾಗೂ ಸುರೇಶ್ ಎನ್.ಎಸ್. ಜೈನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೌಶಲ್ಯಾಭಿವೃದ್ಧಿ ಮತ್ತು ಕೈಗಾರಿಕಾ ತರಬೇತಿಯ ಮಹತ್ವವನ್ನು ವಿವರಿಸಿ ವಿವಿಧ ಮಾಹಿತಿಗಳನ್ನು ಹಂಚಿಕೊಂಡರು.


ಶೈಕ್ಷಣಿಕ ಭೇಟಿಯಲ್ಲಿ ಸುಮಾರು 50ಕ್ಕೂ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮವು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಗಣರಾಜ ಕೆ ಸಂಯೋಜಿಸಿದರು. ಈ ಸಂದರ್ಭದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಮತ್ತು ಅಭಿನಂದನ ಕೆ.ಸಿ. ಜೈನ್ ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಎಲ್ಲಾ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.ಬಳಿಕ ವಿದ್ಯಾರ್ಥಿಗಳ ತಂಡ ಸಂಸೆಯ ಹೊಸನಾಲೆಯ ಕಾಫಿತೋಟಕ್ಕೆ ಭೇಟಿ ನೀಡಿದರು.
ಈ ವೇಳೆ ಸುಕುಮಾರ್ ಜೈನ್ ಹೊಸನಾಲೆ ಕಾಫಿ ತೋಟದಲ್ಲಿನ ಕಾಫಿ ಬೆಳೆಗಾರಿಕೆ, ತೋಟದ ನಿರ್ವಹಣೆ ಮತ್ತು ಗ್ರಾಮೀಣ ಆರ್ಥಿಕ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು. ನಂತರ ವಿದ್ಯಾರ್ಥಿಗಳು ಕುದ್ರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಲಾಕ್ಯ ಅಣೆಕಟ್ಟು ಪ್ರದೇಶಗಳಿಗೆ ಭೇಟಿ ನೀಡಿ ಪರಿಸರ ಸಂರಕ್ಷಣೆ, ಪ್ರಕೃತಿ ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಸುಸ್ಥಿರ ಅಭಿವೃದ್ಧಿಯ ಮಹತ್ವವನ್ನು ತಿಳಿದುಕೊಂಡರು.









