






ಸೇಕ್ರೇಡ್ ಹಾರ್ಟ್ ಕಾಲೇಜು, ಮಡಂತ್ಯಾರ್ ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘ ವತಿಯಿಂದ “ಪವಿತ್ರ ಶಿಕ್ಷಣ ಸಹಾಯತಾ” ವಿದ್ಯಾರ್ಥಿವೇತನ ಯೋಜನೆಯ ಉದ್ಘಾಟನಾ ಕಾರ್ಯಕ್ರಮವು 2026 ಮಾರ್ಚ್ 12 ರಂದು ಕಾಲೇಜಿನ ಆಡಿಯಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಯೋಜನೆಯ ಉದ್ದೇಶ ಸಂಸ್ಥೆಯ ಅರ್ಹ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಒದಗಿಸುವುದು ಮತ್ತು ಅವರಿಗೆ ಉತ್ತೇಜನ ನೀಡುವುದಾಗಿದೆ.ಕಾರ್ಯಕ್ರಮವು ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ರಿಯಾ ಡಿಸೋಜಾ ಹಾಗೂ ತಂಡದವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ನಂತರ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಲ್ಸನ್ ರೂಪೇಶ್ ಮೊರಾಸ್ ಅವರು ಅತಿಥಿಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.ಈ ಯೋಜನೆಯನ್ನು ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರು ಸಾಂಕೇತಿಕವಾಗಿ ಚೆಕ್ ಅನಾವರಣ ಮಾಡುವ ಮೂಲಕ ಉದ್ಘಾಟಿಸಿದರು. “ಪವಿತ್ರ ಶಿಕ್ಷಣ ಸಹಾಯತಾ” ಎಂಬ ಯೋಜನೆ ಹಿರಿಯ ವಿದ್ಯಾರ್ಥಿ ಸಂಘದಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ ಮಹತ್ವದ ನೆರವಿನ ಯೋಜನೆಯಾಗಿದೆ. “ಪವಿತ್ರ” ಎಂಬುದು ಕಾಲೇಜಿನ ಮೊದಲ ಹೆಸರನ್ನು ಸೂಚಿಸುವುದಾಗಿ, “ಶಿಕ್ಷಾ” ಅಂದರೆ ಶಿಕ್ಷಣ ಮತ್ತು “ಸಹಾಯತಾ” ಅಂದರೆ ನೆರವು ಎಂಬ ಅರ್ಥವನ್ನು ಹೊಂದಿದೆ. ಈ ಯೋಜನೆಯ ಮೂಲಕ ಹಿರಿಯ ವಿದ್ಯಾರ್ಥಿ ಸಂಘ ಸಂಸ್ಥೆಯ ವಿದ್ಯಾರ್ಥಿಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತದೆ.


ಉದ್ಘಾಟನಾ ಭಾಷಣದಲ್ಲಿ ವಾಲ್ಟರ್ ನಂದಳಿಕೆ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಜೀವನದಲ್ಲಿ ಯಶಸ್ಸು ಸಾಧಿಸಲು ಮೂರು “U”ಗಳು — Update, Upgrade ಮತ್ತು Uplift ಅಗತ್ಯವೆಂದು ಅವರು ಹೇಳಿದರು. ಜೊತೆಗೆ ಜೀವನದಲ್ಲಿ ದೂರವಿರಬೇಕಾದ ಮೂರು “C”ಗಳು — Comparison, Confusion ಮತ್ತು Complaint ಎಂಬುದನ್ನೂ ವಿದ್ಯಾರ್ಥಿಗಳಿಗೆ ತಿಳಿಸಿದರು. ಹಾಸ್ಯಭರಿತ ಹಾಗೂ ಜ್ಞಾನಪೂರ್ಣವಾದ ಅವರ ಭಾಷಣವನ್ನು ವಿದ್ಯಾರ್ಥಿಗಳು ಬಹಳವಾಗಿ ಮೆಚ್ಚಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಅಲೆಕ್ಸ್ ಐವನ್ ಸೆಕ್ವೇರಾ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ಹಿರಿಯ ವಿದ್ಯಾರ್ಥಿ ಸಂಘ ನಡೆಸುತ್ತಿರುವ ವಿವಿಧ ಚಟುವಟಿಕೆಗಳನ್ನು ಮೆಚ್ಚಿದರು ಹಾಗೂ ವಾಲ್ಟರ್ ನಂದಳಿಕೆ ಅವರನ್ನು ಕಾಲೇಜಿಗೆ ಆಹ್ವಾನಿಸಿದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಜೊತೆಗೆ ಕಾಲೇಜಿನ ಇತ್ತೀಚಿನ ಸಾಧನೆಗಳನ್ನೂ ಅವರು ಪ್ರಸ್ತಾಪಿಸಿದರು.
ಆರಂಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ನಿರ್ದೇಶಕ ನೆಲ್ಸನ್ ಮೊನಿಸ್ ಅವರು ಪರಿಚಯ ಭಾಷಣ ಮಾಡಿದರು. ಅವರು ಕಾಲೇಜಿನ ಚಟುವಟಿಕೆಗಳು ಮತ್ತು ಹಿರಿಯ ವಿದ್ಯಾರ್ಥಿ ಸಂಘದ ವಿವಿಧ ಕಾರ್ಯಕ್ರಮಗಳನ್ನು ವಿವರಿಸಿ ಮುಖ್ಯ ಅತಿಥಿಯನ್ನು ಸಭೆಗೆ ಪರಿಚಯಿಸಿದರು.
ಒಟ್ಟು 23 ವಿದ್ಯಾರ್ಥಿಗಳಿಗೆ ₹1,00,000 ಮೊತ್ತದ ವಿದ್ಯಾರ್ಥಿವೇತನವನ್ನು Achievers Category ಮತ್ತು Financial Need Category ಅಡಿಯಲ್ಲಿ ವಿತರಿಸುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ. ಸಂಬಂಧಿಸಿದ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮವನ್ನು ಬಿ.ಎ ವಿದ್ಯಾರ್ಥಿನಿ ರೇಚಲ್ ಬೆನೋರಾ ಡಿಸೋಜಾ ನಿರ್ವಹಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರೋಜಿಟಾ ಸೆರಾ ಅವರು ವಂದನಾರ್ಪಣೆ ಸಲ್ಲಿಸಿದರು.









