ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ ಧರ್ಮಸ್ಥಳಕ್ಕೆ ಪುರಪ್ರವೇಶ

0

ಬೆಳ್ತಂಗಡಿ: ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಮಾನೋತ್ಸವ ವರ್ಷದ ಪ್ರಯುಕ್ತ ಬಾಬಾರವರ ದಿವ್ಯಾವತಾರದ ಸೌರಭವನ್ನು ಪಸರಿಸಲು ಮತ್ತು ದಿವ್ಯ ಸಂದೇಶವನ್ನು ಸಾರುವ ಉದ್ದೇಶದೊಂದಿಗೆ ಭಾರತದಾದ್ಯಂತ ಸಂಚಾರ ಮಾಡುತ್ತಿರುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ದಿವ್ಯ ರಥ ಮಾ.9 ರಂದು ಧರ್ಮಸ್ಥಳಕ್ಕೆ ಪುರಪ್ರವೇಶ ಮಾಡಿದೆ.

ಪುತ್ತೂರಿನಿಂದ ಆಗಮಿಸಿದ ರಥವನ್ನು ಉಪ್ಪಿನಂಗಡಿಯಲ್ಲಿ ಸ್ವಾಗತಿಸಲಾಯಿತು. ಬಳಿಕ ವಾಹನ ಜಾಥದೊಂದಿಗೆ ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ರಸ್ತೆಯ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿತು.

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ರಥದಲ್ಲಿರುವ ಪಾದುಕೆಗೆ ಪುಷ್ಪಹಾರ ಅರ್ಪಿಸಿದರು.ಬಳಿಕ ಪ್ರವಚನ ಮಂದಿರದಲ್ಲಿ ಜರಗಿದ ಭಜನಾ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಸತ್ಯಸಾಯಿ ಬಾಬಾರವರ ಪವಾಡಗಳ ಬಗ್ಗೆ ಮತ್ತು ಕ್ಷೇತ್ರಕ್ಕೆ ಬಾಬಾರವರು ಬಂದಿದ್ದನ್ನು ನೆನಪಿಸಿದರು‌.

ಸತ್ಯಸಾಯಿ ಸೇವಾ ಸಂಸ್ಥೆಗಳ ಕರ್ನಾಟಕ ಉತ್ತರ ಸತ್ಯಸಾಯಿ ಸಂಸ್ಥೆಗಳ ರಾಜ್ಯಾಧ್ಯಕ್ಷ ಎಂ.ಪದ್ಮನಾಭ ಪೈ, ಬೆಳ್ತಂಗಡಿ ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕ ಕೃಷ್ಣಪ್ಪ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here