






ಬೆಳ್ತಂಗಡಿ : 77ನೇ ವರ್ಷದ ಗಣರಾಜ್ಯ ದಿನಾಚರಣೆಯನ್ನು ಬೆಳ್ತಂಗಡಿ ನಗರದ ಸುದೆಮುಗೇರು ಅಂಗನವಾಡಿ ಪರಿಸರದಲ್ಲಿ ಜ.26ರಂದು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಸಮಾರಂಭದಲ್ಲಿ ಮುಖ್ಯ ಅತಿಥಿ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಉಪನ್ಯಾಸಕ ರಘು ಧರ್ಮಸೇನ ಎಲ್ಲಿ ಸಂವಿಧಾನ ಆಧಾರಿತ ಗಣರಾಜ್ಯ ಇರುತ್ತದೋ ಅಲ್ಲಿ ರಾಷ್ಟ್ರದ ಹಾಗೂ ಗಣರಾಜ್ಯದ ಸಾರ್ವಭೌಮ ಅಧಿಕಾರ ಜನರ ಕೈಯಲ್ಲಿ ಇರುತ್ತದೆಯೇ ಹೊರತು ರಾಜಕಾರಣಿಗಳು ಅಧಿಕಾರಿಗಳ ಕೈಯಲ್ಲಿ ಇರುವುದಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂವಿಧಾನದ ಜವಾಬ್ದಾರಿಯನ್ನು ನಿಭಾಯಿಸಲು ಇರುವ ಸೇವಕರೇ ಹೊರತು ಮಾಲೀಕರಲ್ಲ; ಗಣರಾಜ್ಯದ ನೈಜ ಮಾಲೀಕರು ಭಾರತದ ಜನರು ಆಗಿದ್ದಾರೆ. ಇದುವೇ ಗಣರಾಜ್ಯದ ನೈಜ ಅರ್ಥ. ಈ ನೆಲೆಯಲ್ಲಿ ಜನಸಾಮಾನ್ಯರ ಕೈಯಲ್ಲಿ ದೇಶದ ಅಧಿಕಾರವನ್ನು ಇರಿಸಿದೆ. ಇದುವೇ ಡಾ ಅಂಬೇಡ್ಕರ ಬರೆದಿರುವ ಸಂವಿಧಾನದ ಮಹತ್ವ .ಆದ್ದರಿಂದ ನಾವೆಲ್ಲ ಭಾರತೀಯರು ಒಟ್ಟಾಗಿ ಯಾವುದೇ ತಾರತಮ್ಯಗಳು ಇಲ್ಲದೆ ಈ ಮಣ್ಣಿನಲ್ಲಿ ಜೀವಿಸಬೇಕಿದೆ ಎಂದು ಒತ್ತಿ ಹೇಳಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಗೂ ನೇತೃತ್ವವನ್ನು ವಹಿಸಿದ್ದ ಜಗದೀಶ್ ಮಾಜಿ ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಕೆ.ಡಿ.ಪಿ ಸದಸ್ಯರು ಮಾತನಾಡಿ ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ. ಈ ಬಳಸಿಕೊಂಡು ನಮ್ಮ ವಠಾರದ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕಾಗಿದೆ. ಅದಕ್ಕೆ ಬೇಕಾಗುವ ಎಲ್ಲಾ ಸಹಕಾರವನ್ನು ನಾನು ಇನ್ನೂ ಮುಂದೆಯೂ ಒದಗಿಸುತ್ತೇನೆ ಎಂದರು.

ವೇದಿಕೆಯಲ್ಲಿ ಕಾನೂನು ವಿದ್ಯಾರ್ಥಿ ಶರತ್, ಅಂಗನವಾಡಿ ಕೇಂದ್ರದ ಅಧ್ಯಕ್ಷೆ ನಾಜ್ಮಿನ್ ಹುಸೇನ್, ಅಂಗನವಾಡಿ ಶಿಕ್ಷಕಿ ವಿದ್ಯಾ ಶೇಖರ್, ಸಹಾಯಕಿ ರೋಹಿಣಿ , ಮಹೇಶ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅಶೋಕ್ ಅವರು ನಿರೂಪಿಸಿ ಮೆರುಗು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ನಡೆಸಿದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಕಾರ್ಯಕ್ರಮದ ಅತಿಥಿಗಳು ಪ್ರಶಸ್ತಿಗಳನ್ನು ವಿತರಿಸಿದರು









