







ದಯಾ ವಿಶೇಷ ಶಾಲೆಯಲ್ಲಿ ಭಾರತದ 76ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಯಾ ವಿಶೇಷ ಶಾಲೆಯ ನಿರ್ದೇಶಕರಾದ ಫಾ.ವಿನೋದ್ ಮಸ್ಕರೇನಸ್ ರವರು ವಹಿಸಿಕೊಂಡು, ಫಾ. ಏಲಿಯಾಸ್ ಡಿಸೋಜಾ ಸೈಂಟ್ ಪೀಟರ್ ಕ್ಲೇವರ್ ಚರ್ಚ್ ಅಳದಂಗಡಿ, ಚೇತನ ಸ್ತ್ರೀ ಸಂಘಟನೆಯ ಅಧ್ಯಕ್ಷರಾದ ಸೆಲಿನಾ ಕ್ರಾಸ್ತಾ, ದಯಾ ವಿಶೇಷ ಶಾಲೆಯ ಮುಖ್ಯಶಿಕ್ಷಕಿ ದಿವ್ಯಾ ಟಿ.ವಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗಣ್ಯರು ವಿಶೇಷ ಚೇತನ ಮಕ್ಕಳೊಡಗೂಡಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಹಾಗೂ ಭಾರತದ ಸಂವಿಧಾನ ಪುಸ್ತಕಕ್ಕೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ದೈಹಿಕ ಶಿಕ್ಷಕಿ ಜೆನ್ವಿರಾ ವಾಸ್ ಅವರು ಉಪಸ್ಥಿತರಿದ್ದ ಸರ್ವರಿಗೂ ಭಾರತ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಫಾ. ಏಲಿಯಾಸ್ ಡಿಸೋಜಾ ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯವನ್ನು ಕೋರುತ್ತಾ, ನಮ್ಮ ಸೈಂಟ್. ಪೀಟರ್ ಕ್ಲೇವರ್ ಚರ್ಚ್ ಅಳದಂಗಡಿ ಇಲ್ಲಿನ ಚೇತನ ಸ್ತ್ರೀ ಸಂಘಟನೆಯು ಹಲವಾರು ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಇಂದಿನ ದಯಾ ಶಾಲೆಯ ಈ ಭೇಟಿಯೂ ಕೂಡಾ ಅವರು ಯಶಸ್ವಿಯಾಗಿ ಆಯೋಜಿಸಿದ ಕಾರ್ಯಕ್ರಮಗಳಲ್ಲೊಂದು. ಈ ವಿಶೇಷ ಚೇತನ ಮಕ್ಕಳು ನಮ್ಮೆಲ್ಲರ ಹೊಣೆ. ಶಾಲೆಯ ಸಿಬ್ಬಂದಿಗಳು ಇಲ್ಲಿನ ಮಕ್ಕಳನ್ನು ಪ್ರೀತಿಸುತ್ತಿರುವುದರೊಂದಿಗೆ ತಮ್ಮ ರಾಷ್ಟ್ರ ಪ್ರೇಮವನ್ನೂ ತಮ್ಮ ಸೇವೆಯ ಮೂಲಕ ತೋರ್ಪಡಿಸುತ್ತಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಗೆ ಹಾಗೂ ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಫಾ. ವಿನೋದ್ ಮಸ್ಕರೇನ್ಹಸ್ ದೊಡ್ಡ ಸೆಲ್ಯೂಟ್ ಎಂದರು.



ದೇವರು ಇವರೆಲ್ಲರ ಸೇವೆಗೆ ಅತ್ಯುತ್ತಮ ಪ್ರತಿಫಲವನ್ನು ನೀಡಲಿ ಎಂದು ಆಶಿಸಿದರು. ನಂತರ ಮಾತನಾಡಿದ ಫಾ.ವಿನೋದ್ ಮಸ್ಕರೇನಸ್ ಸಂವಿಧಾನವು ಜಾತ್ಯಾತೀತವಾದದ್ದು, ಎಲ್ಲಾ ಜಾತಿ, ಮತಗಳಿಗೂ ಮಿಗಿಲಾಗಿ ಮಾನವೀಯತೆಯನ್ನು ಸಾರುವ ಗ್ರಂಥ. ಇಡೀ ವಿಶ್ವಕ್ಕೆ ಮಾದರಿಯಾದ ಗ್ರಂಥ ಮತ್ತು ಇದರ ಶಿಲ್ಪಿಯಾದ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಅವರೊಂದಿಗೆ ಅಂದು ಸಂವಿಧಾನ ರಚನೆಯಲ್ಲಿ ತೊಡಗಿಸಿಕೊಂಡವರ ಉತ್ತಮ ವಿಚಾರಗಳು, ಯೋಚನೆಗಳು ಇಂದು ನಮ್ಮ ದೇಶದಲ್ಲಿ ಭಾತೃತ್ವವನ್ನು ಬೆಳೆಸಲು ಕಾರಣವಾಗಿದೆ. ಇಂದು ನಮ್ಮ ಮೇಲಿನ ಪ್ರೀತಿಯಿಂದ ಸಂಸ್ಥೆಗೆ ಆಗಮಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಫಾ. ಏಲಿಯಾಸ್ ಡಿಸೋಜಾ ಹಾಗೂ ಚೇತನ ಸ್ತ್ರೀ ಸಂಘಟನೆಯ ಸರ್ವ ಸದಸ್ಯರಿಗೂ ವಂದಿಸಿ, ಹಲವಾರು ಬಾರಿ ನಮ್ಮ ಮಕ್ಕಳಿಗಾಗಿ ಅನೇಕ ರೀತಿಯಲ್ಲಿ ತಮ್ಮ ಸಹಾಯವನ್ನು ನೀಡುತ್ತಾ ಬಂದಿದ್ದು, ನಮ್ಮ ಮಕ್ಕಳ ಬಾಳಲ್ಲಿ ಬೆಳಕಾಗಿದ್ದಾರೆ. ಎಲ್ಲರಿಗೂ ವಂದಿಸುತ್ತಾ ಅವರೆಲ್ಲರನ್ನು ದೇವರು ಆಶೀರ್ವದಿಸಲಿ ಎಂದರು.
ಕಾರ್ಯಕ್ರಮದಲ್ಲಿ ಚೇತನ ಸ್ತ್ರೀ ಸಂಘಟನೆ ಅಳದಂಗಡಿ ಮತ್ತು ಚರ್ಚ್ ನ ಕುಟುಂಬಗಳಿಂದ ಸಂಗ್ರಹಿಸಿದ ದವಸ ಧಾನ್ಯಗಳು, ತರಕಾರಿ ಮತ್ತು ಧನಸಹಾಯವನ್ನು ಶಾಲಾ ನಿರ್ದೇಶಕರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ವಿಶೇಷ ಚೇತನ ಮಕ್ಕಳಿಂದ ದೇಶ ಪ್ರೇಮವನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಶಿಕ್ಷಕಿ ಸುಜಾತಾ ಸರ್ವರನ್ನು ಸ್ವಾಗತಿಸಿ, ಶಿಕ್ಷಕಿ ಹೇಮಾವತಿ ವಂದಿಸಿದರು. ಶಿಕ್ಷಕಿ ಸುಮನಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.









