ಫ್ರೀಡೈವಿಂಗ್ ನಲ್ಲಿ ಅಂತರಾಷ್ಟ್ರೀಯ ಸರ್ಟಿಫಿಕೇಟ್ ಕೋರ್ಸ್ ಪೂರೈಸಿದ “ಶೌರ್ಯ” ಸ್ವಯಂ ಸೇವಕರು

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಪತ್ತುಗಳ ನಿರ್ವಹಣೆಗೆಂದು ರಚಿಸಲಾದ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಆಯ್ದ ಸ್ವಯಂಸೇವಕರಿಗೆ ಈಜುವಿಕೆ ಹಾಗೂ ಮುಳುಗುವಿಕೆಯ ಮೂಲಕ ಆಪತ್ತಿನಲ್ಲಿರುವವರ ರಕ್ಷಣೆಯ ವಿಧಾನಗಳ ಬಗ್ಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮ ಯಶಸ್ವೀಯಾಗಿ ಸಂಪನ್ನಗೊಂಡಿತು. ವಿಟ್ಲ ಸಮೀಪದ ವಾರಾಣಾಸಿ ಸಾವಯವ ಫಾರ್ಮ್ ಅಡ್ಯನಡ್ಕದಲ್ಲಿ ನಡೆದ ತರಬೇತಿಯು ಜ. 7ರಿಂದ ಆರಂಭಗೊಂಡು 13ರಂದು ಮುಕ್ತಾಯಗೊಂಡಿತು. ಅಂತರಾಷ್ಟ್ರೀಯ ಈಜು ಹಾಗೂ ಸುರಕ್ಷಿತ ಮುಳುಗುವಿಕೆ ತರಬೇತಿ ಸಂಸ್ಥೆಯಾದ FCOA (Freeduving Coaches Of Asia) ವತಿಯಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

FCOA ಸ್ಥಾಪಕರಾದ ಹಾಲೆಂಡ್ ನ ಜೆರೋಯೆನ್ ಎಲೌಟ್, ನ್ಯೂಯಾರ್ಕಿನ ಅಂಜಲಿ, ಕೇರಳ ಕೊಟ್ಟಯಂನ ಜಾಕೋಬ್ ಜೋಸ್ ಹಾಗೂ ತಂಡದವರು ಶೌರ್ಯ ತಂಡದ ಸ್ವಯಂಸೇವಕರಿಗೆ ವಿಶೇಷ ತರಬೇತಿ ನಡೆಸಿದರು.

ನೀರಿನ ಮೇಲ್ಮೈಯಲ್ಲಿ ದಣಿವಿರದ ದೀರ್ಘ ತೇಲುವಿಕೆ, ನೀರಿನಲ್ಲಿ ಮುಳುಗಿ ಪ್ರಜ್ಞಾಹೀನರಾದವರ ರಕ್ಷಣೆ, ಆಳನೀರಿನಲ್ಲಿ ಸುರಕ್ಷಿತ ಮುಳುಗುವಿಕೆ, ಎತ್ತರದ ಕಟ್ಟಡದಿಂದ ಏಕಾಂಗಿಯಾಗಿ ಹಗ್ಗದ ಸಹಾಯದಿಂದ ಇಳಿಯುವಿಕೆ, ನೀರಿನಲ್ಲಿ ಮುಳುಗಿದ ವಸ್ತುಗಳ ಪತ್ತೆಗೆ ಗುರುತುಗಳನ್ನು ನಿಗದಿಪಡಿಸುವುದು ಹಾಗೂ ಹುಡುಕುವುದು, ದಿಕ್ಸೂಚಿ ಸಹಾಯದಿಂದ ಅಪರಿಚಿತ ಸ್ಥಳ ಅಥವಾ ಕಾಡಿನಲ್ಲಿ ಸುರಕ್ಷಿತವಾಗಿ ಹಿಂದಿರುಗುವಿಕೆ, ಹಗ್ಗದ ವಿವಿಧ ಗಂಟುಗಳ ರಚನೆ ಹಾಗೂ ವಿಶ್ರಾಂತಿ ಇಲ್ಲದೆ 200 ಮೀಟರ್ ಗಳ ದಣಿವು ರಹಿತ ಈಜುವಿಕೆಯ ತರಬೇತಿಯನ್ನು ಸ್ವಯಂಸೇವಕರಿಗೆ ತರಬೇತುದಾರರು ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಅವರ ನಿರ್ದೇಶನದಂತೆ ಈಜುವಿಕೆಯಲ್ಲಿ ಪರಿಣಿತಿ ಸಾಧಿಸಲು ಆಸಕ್ತಿ ಇರುವ ಬೆಳ್ತಂಗಡಿ ತಾಲ್ಲೂಕಿನ 6 ಮಂದಿಯನ್ನು ಗುರುತಿಸಲಾಗಿದ್ದು, ಜನಜಾಗೃತಿ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ವಿವೇಕ್. ವಿ. ಪಾಯ್ಸ ಅವರ ಮಾರ್ಗದರ್ಶನದಲ್ಲಿ ಸ್ವಯಂಸೇವಕರು ತರಬೇತಿ ಪಡೆದುಕೊಂಡರು.

ಬೆಳ್ತಂಗಡಿ ‘ಶೌರ್ಯ’ ಸಮಿತಿಯ ಮಾ.ಅವಿನಾಶ್ ಭಿಡೆ, ಸ್ವಯಂಸೇವಕರಾದ ಸಚಿನ್ ಭಿಡೆ, ಜಯರಾಮ ನಡ, ಅನಿಲ್ ಪಿ.ಎ. ಸತೀಶ್ ನೆರಿಯ, ರಮೇಶ ಬೈರಕಟ್ಟ ಅವರು ತರಬೇತಿಯನ್ನು ಪೂರ್ಣಗೊಳಿಸಿರುತ್ತಾರೆ. ತರಬೇತಿಯನ್ನು ಯಶಸ್ವೀಯಾಗಿ ಪೂರೈಸಿದ ಸ್ವಯಂಸೇವಕರಿಗೆ FCOA ಸಂಸ್ಥೆಯು ಪ್ರಮಾಣಪತ್ರ ನೀಡಿ ಗೌರವಿಸಿದೆ.

LEAVE A REPLY

Please enter your comment!
Please enter your name here