






ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಫಾ. ಎಲಿಯಾಸ್ ಡಿಸೋಜರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. “ಕ್ರಿಸ್ಮಸ್ ಹಬ್ಬವು ಪ್ರೀತಿ, ಶಾಂತಿ, ತ್ಯಾಗ ಮತ್ತು ಸೇವಾಭಾವನೆಯ ಮಹತ್ವವನ್ನು ನಮಗೆ ನೆನಪಿಸುತ್ತದೆ. ಏಸು ಕ್ರಿಸ್ತನ ಜನ್ಮವು ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ನಮಗೆ ಪ್ರೇರಣೆ ನೀಡುತ್ತದೆ. ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸದಲ್ಲಷ್ಟೇ ಅಲ್ಲದೆ, ಶಿಸ್ತಿನೊಂದಿಗೆ, ಮೌಲ್ಯಾಧಾರಿತ ಜೀವನವನ್ನು ನಡೆಸುವ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು. ಇಂತಹ ಹಬ್ಬಗಳ ಆಚರಣೆ ಮಕ್ಕಳಲ್ಲಿ ಸಹೋದರತ್ವ, ಸಹಾನುಭೂತಿ ಮತ್ತು ಪರಸ್ಪರ ಗೌರವವನ್ನು ಬೆಳೆಸುತ್ತದೆ. ನಮ್ಮ ಶಾಲೆ ಜ್ಞಾನ ಜೊತೆಗೆ ಸಂಸ್ಕಾರವನ್ನು ನೀಡುವ ದೀಪವಾಗಲಿ ಈ ಕ್ರಿಸ್ಮಸ್ ಹಬ್ಬವು ಎಲ್ಲರ ಜೀವನದಲ್ಲಿ ಹೊಸ ಆಸೆ, ಸಂತೋಷ ಮತ್ತು ಶಾಂತಿಯನ್ನು ತರಲಿ” ಎಂದು ಹಾರೈಸಿದರು.


ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಕ್ರಿಸ್ಮಸ್ ಗೀತೆಗಳನ್ನು ಹಾಡಿ, ಏಸು ಕ್ರಿಸ್ತನ ಜನ್ಮದ ಸಂದೇಶವನ್ನು ಸಾರಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ ನೃತ್ಯ, ರೂಪಕವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿ, ಹಬ್ಬದ ಹರ್ಷವನ್ನು ಹೆಚ್ಚಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಸಾಂತಾ ಕ್ಲಾಸ್ ಆಗಮನದಿಂದ ಮಕ್ಕಳಲ್ಲಿ ವಿಶೇಷ ಉತ್ಸಾಹ ಕಂಡುಬಂದಿತು. ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಲಾಯಿತು. ಮುಖ್ಯ ಶಿಕ್ಷಕಿ ಮೋನಿಕಾ ಡಿಸೋಜ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಾನಿಕಾ ಸ್ವಾಗತಿಸಿ, ಅನುಷಾ ನಿರೂಪಣೆ ಮಾಡಿದರು. ಯಜ್ಞೇಶ್ ಧ್ಯನವಾದವಿತ್ತರು.









