






ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನೆಲ್ಯಾಡಿ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು, ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಎ.ಜೆ ದಂತ ವಿಜ್ಞಾನ ಸಂಸ್ಥೆ ಇದರ ಸಹಯೋಗದೊಂದಿಗೆ ಡಿ. 14ರಂದು ನೆಲ್ಯಾಡಿ ಪಿ.ಎಂ.ಶ್ರೀ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ ಕಾರ್ಯಕ್ರಮವು ಜರಗಿತು.


ಸಂಘದ ಅಧ್ಯಕ್ಷ ಭಗೀರಥ ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ನಿರ್ದೇಶಕ ಚಂದ್ರಶೇಖರ್, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್., ಮಂಗಳೂರು ಎ.ಜೆ ಆಸ್ಪತ್ರೆ ಡೆಂಟಲ್ ಡಿಪಾರ್ಟ್ಮೆಂಟ್ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಸಂದೀಪ್, ನೆಲ್ಯಾಡಿ ಪಿ.ಎಂ.ಶ್ರೀ ಸ.ಉ.ಹಿ.ಪ್ರಾ ಶಾಲೆ ಮುಖ್ಯ ಗುರುಗಳು ವೀಣಾ ಮಸ್ಕರೆನಸ್, ಮೋನಪ್ಪ ಪೂಜಾರಿ ಕಂಡೆತ್ಯಾರು, ಬೆಳ್ತಂಗಡಿ ಶ್ರೀ ಗುರುದೇವ ವಿ.ಸ.ಸಂ ವಿಶೇಷಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಧ್ಯಾಹ್ನದವರೆಗೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಗ್ರಾಹಕರು, ಶಾಲೆಯ ಪೋಷಕರು, ವಿದ್ಯಾರ್ಥಿಗಳು, ಊರ ನಾಗರಿಕರು ಸೇರಿದಂತೆ ಸುಮಾರು 150ಕ್ಕೂ ಹೆಚ್ಚಿನ ಮಂದಿ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಊರಿನ ಗಣ್ಯರು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ದಿನಕರ ಕೆ.ಎಚ್., ವಿವಿಧ ಶಾಖೆಯ ಶಾಖಾ ವ್ಯವಸ್ಥಾಪಕರುಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ದೀಕ್ಷಾ ಬಿ. ಪ್ರಾರ್ಥಿಸಿ, ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನೆಲ್ಯಾಡಿ ಶಾಖೆಯ ಪೂರ್ಣಿಮಾ.ಎ ಕಾರ್ಯಕ್ರಮ ನಿರೂಪಿಸಿದರು. ನೆಲ್ಯಾಡಿ ಶಾಖೆಯ ಶಾಖಾ ವ್ಯವಸ್ಥಾಪಕ ಪ್ರದೀಶ್ ನಡುವಾಲ್ ವಂದನಾರ್ಪಣೆ ಸಲ್ಲಿಸಿದರು.









