ಕಳೆಂಜ: ಗ್ರಾಮ ಪಂಚಾಯತ್ ನಲ್ಲಿ 2025-26ನೇ ಸಾಲಿನ ವಿಕಲಚೇತನರ ಸಮನ್ವಯ ಗ್ರಾಮ ಸಭೆ

0

ಕಳೆಂಜ: ವಿಶ್ವ ವಿಕಲಚೇತನರ ದಿನಾಚರಣೆ’ ಯ ಪ್ರಯುಕ್ತ ಕಳೆಂಜ ಗ್ರಾಮ ಪಂಚಾಯತ್ ನಲ್ಲಿ 2025 – 26ನೇ ಸಾಲಿನ ವಿಕಲಚೇತನರ ಸಮನ್ವಯ ಗ್ರಾಮ ಸಭೆಯು ಸರ್ಕಾರದ ಆದೇಶದಂತೆ ಡಿ.16ರಂದು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪಂಚಾಯತ್ ಉಪಾಧ್ಯಕ್ಷ ವಿಶ್ವನಾಥ ಹೆಚ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಪ್ರಸ್ತಾವನೆ ಮತ್ತು 2024 – 25ನೇ ಸಾಲಿನ ವಾರ್ಷಿಕ ವರದಿಯನ್ನು ಗ್ರಾಮೀಣ ವಿಶೇಷಚೇತನರ ಪುನರ್ವಸತಿ ಕಾರ್ಯಕರ್ತೆ ವಿಮಲ ಎನ್. ಅವರು ವಾಚಿಸಿದರು. ಬೆಳ್ತಂಗಡಿ ತಾಲೂಕು ಪಂಚಾಯತ್ ನ ವಿವಿಧೋದ್ದೇಶ ಪುನರ್ವಸತಿ ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜಾ ಅವರು ವಿಕಲಚೇತನರಿಗೆ ಸರಕಾರದಿಂದ ಹಾಗೂ ಇತರ ಇಲಾಖೆಗಳಿಂದ ಲಭ್ಯವಿರುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಮಾತನಾಡಿ, 15ನೇ ಹಣಕಾಸು ಯೋಜನೆಯಲ್ಲಿ ವಿಶೇಷಚೇತನರಿಗೆ ನೀಡಿದ ಸೌಲಭ್ಯಗಳ ಬಗ್ಗೆ ತಿಳಿಸಿದರು. ಸಭೆಯಲ್ಲಿ ವಿಶೇಷಚೇತನ ಫಲಾನುಭವಿಗಳ ಅಹವಾಲುಗಳನ್ನು ಸ್ವೀಕರಿಸಲಾಯಿತು. ಬೆಳ್ತಂಗಡಿ ಸೌಭಾಗ್ಯ ವಿಶೇಷಚೇತನರ ಪತ್ತಿನ ಸಹಕಾರ ಸಂಘ ನಿಯಮಿತ ವ್ಯವಸ್ಥಾಪಕರು ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪಂಚಾಯತ್ ನ ಉಪಾಧ್ಯಕ್ಷ ವಿಶ್ವನಾಥ ಹೆಚ್. ಅವರು ಮಾತನಾಡಿ ನಮ್ಮ ಗ್ರಾಮದ ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ನಮ್ಮೆಲ್ಲರ ಸಹಕಾರ ಸದಾ ಇದೆ ಎಂದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ನ ಸದಸ್ಯೆ ಕುಸುಮಾ, ಆಶಾ ಕಾರ್ಯಕರ್ತೆ ಮೀನಾಕ್ಷಿ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ವಿಮಲ, ನಿಡ್ಲೆ ಪಂಚಾಯತ್ ನ ವಿ.ಆರ್. ಡಬ್ಲ್ಯೂ. ಹೇಮಲತಾ, ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಶೇಷಚೇತನರು ಮತ್ತು ಪೋಷಕರು ಹಾಗೂ ಪಂಚಾಯತ್ ನ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ ಅವರು ಸ್ವಾಗತಿಸಿದರು. ಗ್ರಾಮೀಣ ವಿಶೇಷಚೇತನರ ಪುನರ್ವಸತಿ ಕಾರ್ಯಕರ್ತೆ ವಿಮಲ ಎನ್. ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here