



ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ತಂಗಡಿ ಶಾಖಾ ಕಚೇರಿಯಲ್ಲಿ ಲಾಯಿಲ ಜ್ಯೋತಿ ಆಸ್ಪತ್ರೆ ಹಾಗೂ ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಇವರ ಜಂಟಿ ಸಹಯೋಗದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಮೂಲಭೂತ ಜೀವ ರಕ್ಷಣೆ (ಬಿ.ಎಲ್.ಎಸ್ – Basic Life Support) ತರಬೇತಿ ಕಾರ್ಯಗಾರವನ್ನು ಡಿ.13ರಂದು ಸಂಘದ ಬೆಳ್ತಂಗಡಿ ಶಾಖೆಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರು ಮಾತನಾಡಿ, ಜ್ಯೋತಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ವರ್ಗದೊಂದಿಗೆ ನಡೆಸಿದ ಚರ್ಚೆಯಿಂದ ಪ್ರೇರಿತರಾಗಿ ಸಂಘದಲ್ಲಿ ಆರೋಗ್ಯ ಜಾಗೃತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂಬ ಆಲೋಚನೆ ಮೂಡಿದುದಾಗಿ ತಿಳಿಸಿದರು. ಇಂದಿನ ದಿನಗಳಲ್ಲಿ ಉದ್ಬವಿಸುವ ಅನಾರೋಗ್ಯ ಸಮಸ್ಯೆಗಳು ಕುಟುಂಬದಲ್ಲಿ ಆರ್ಥಿಕ ಹಾಗೂ ಪರಿಸರದಲ್ಲಿ ಸಾಮಾಜಿಕ ಸಮಸ್ಯೆಗಳು ಉಂಟು ಮಾಡುತ್ತವೆ. ‘ಆರೋಗ್ಯವೇ ಭಾಗ್ಯ’ ಎಂಬಂತೆ ಪ್ರತಿಯೊಬ್ಬರೂ ತಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯನ್ನು ಸರಿಯಾಗಿ ಅನುಸರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ಅವರು ಹೇಳಿದರಲ್ಲದೆ ಇಂದು ಮುಖ್ಯವಾಗಿ ಹ್ರದಯಕ್ಕೆ ಸಂಬಂಧಿಸಿ ಅರೋಗ್ಯ ಕಾರ್ಯಕರ್ತರು ತರಬೇತಿ ನೀಡಲಿದ್ದಾರೆ. ಇದರ ಸದುಪಯೋಗವನ್ನು ಪ್ರತೀಯೊಬ್ಬರು ಮುಂದಿನ ದಿನಗಳಲ್ಲಿ ಪಡೆದುಕೊಳ್ಳಲು ಸಲಹೆ ನೀಡಿದರು.ಸಂಘದ ಸಿಬ್ಬಂದಿ ವರ್ಗವು ಆರೋಗ್ಯದ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಬೇಕೆಂದು ಅವರು ಕರೆ ನೀಡಿದರು.
ಕೆಎಂಸಿ ಆಸ್ಪತ್ರೆ ಮಂಗಳೂರಿನ ನುರಿತ ವೈದ್ಯ ಡಾ. ರಕ್ಷಿತ್ ಅವರು ತರಬೇತಿ ನೀಡುತ್ತಾ ಅನೇಕ ಸಂದರ್ಭಗಳಲ್ಲಿ ಜನರ ತಪ್ಪಾದ ರೀತಿಯ ನಿರ್ವಹಣೆಯಲ್ಲಿ ಜೀವಕ್ಕೆ ಅಪಾಯ ಆಗುವ ಸಂಭವವೇ ಹೆಚ್ಚು. ಹೃದಯಘಾತಕ್ಕೆ ಸಂಬಂಧಿಸಿದಂತೆ ಉಸಿರಾಟದ ತೊಂದರೆ, ಅಚೇತನ ಸ್ಥಿತಿ ಮುಂತಾದ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ತಲುಪುವವರೆಗೆ ಸೂಕ್ತ ಸಮಯದಲ್ಲಿ ಸರಿಯಾದ ಕ್ರಮ ಕೈಗೊಂಡರೆ ಅಮೂಲ್ಯ ಜೀವವನ್ನು ಉಳಿಸಬಹುದೆಂದು ತಿಳಿಸಿದರು. ಈ ಉದ್ದೇಶದಿಂದಲೇ ಬಿ.ಎಲ್.ಎಸ್ ಇಂದಿನ ತರಬೇತಿ ಕಾರ್ಯಕ್ರಮವನ್ನು ಅನುಗ್ರಹ ಸಹಕಾರಿ ಸಂಘದೊಂದಿಗೆ ಹಮ್ಮಿಕೊಳ್ಳಲು ಸಂತೋಷವಾಗಿದೆ ಎಂದು ಹೇಳಿದರು. ಇದನ್ನು ಭಾಗವಹಿದ ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.


ತರಬೇತಿಯ ಭಾಗವಾಗಿ ಸಿಪಿಆರ್ (CPR), ಕೃತಕ ಉಸಿರಾಟ, ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುವ ವಿಧಾನಗಳು ಹಾಗೂ ಜೀವ ರಕ್ಷಕ ಉಪಕರಣಗಳ ಬಳಕೆ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಜೊತೆಗೆ ಹಾವು ಕಡಿತ,ವಾಹನ ಅಪಘಾತ ಹಾಗೂ ಆಪಸ್ಮಾರದಂತಹ ಅನೀರಿಕ್ಷಿತ ಘಟನೆಗಳ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಮನದಟ್ಟು ಆಗುವ ರೀತಿಯಲ್ಲಿ ವಿವರವಾದ ಪ್ರಾತ್ಯಕ್ಷಿಕ ತರಬೇತಿ ನೀಡಲಾಯಿತು. ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ಸಿಪಿಆರ್ ಮೂಲಕ ಜೀವ ರಕ್ಷಿಸುವ ವಿಧಾನವನ್ನು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.
ಕಾರ್ಯಕ್ರಮದಲ್ಲಿ ಜೆನ್ನಿ (ಕೋ-ಆರ್ಡಿನೇಟರ್, ಕೆಎಂಸಿ ಆಸ್ಪತ್ರೆ ಮಂಗಳೂರು),ಜ್ಯೋತಿ ಆಸ್ಪತ್ರೆಯ ಫಿಜಿಯೋಥೆರಪಿಸ್ಟ್ ಧರ್ಮಭಗಿಣಿ ಆನ್ ಫ್ರಾನ್ಸಿಸ್ ಮತ್ತು ಎಚ್.ಆರ್. ವಿಭಾಗದ ವಿಷ್ಣು ಉಪಸ್ಥಿತರಿದ್ದು ಸಂಪೂರ್ಣ ಸಹಕಾರ ನೀಡಿದರು. ಭಾಗವಹಿಸಿದ ಎಲ್ಲರಿಗೂ ಆಸ್ಪತ್ರೆಯಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ತರಬೇತಿ ಪಂಗಡಕ್ಕೆ ಸಂಘದ ಅಧ್ಯಕ್ಷರು ಸ್ಮರಣಿಕೆ ನೀಡಿ ಗೌರವಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ವಿಲ್ಸನ್ ನೆಲ್ಸನ್ ಮೋನಿಸ್ ಅವರು ಸ್ವಾಗತಿಸಿ, ನಿರೂಪಿಸಿ, ಧನ್ಯವಾದಗಳನ್ನು ಅರ್ಪಿಸಿದರು.









