ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ

0

ಬೆಳ್ತಂಗಡಿ: ಆಳ್ವಾಸ್ ಸ್ವಾಯತ್ತ ಕಾಲೇಜಿನ ಮಾನವ ಹಕ್ಕುಗಳ ಕೋಶ ಹಾಗೂ ಸಮಾಜ ಕಾರ್ಯ ವಿಭಾಗ, ಮಾನವಿಕ ವಿಭಾಗ,  ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ, ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಘಟಕಗಳ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕ ಹಾಗೂ ಬರಹಗಾರ ಅರವಿಂದ ಚೊಕ್ಕಾಡಿ ಮಾತನಾಡಿ, ಮಾನವ ಹಕ್ಕುಗಳ ದಿನಾಚರಣೆ ಎಲ್ಲೆಡೆ ನಡೆಯುತ್ತಿದ್ದರೂ ಅದರ ಗಂಭೀರತೆಯನ್ನು ಮನಸ್ಸಿನಲ್ಲಿ ಇಟ್ಟು ಕಾರ್ಯಕ್ರಮ ಕೈಗೊಳ್ಳುವುದು ಕಡಿಮೆ. ಜಾತಿ, ಧರ್ಮ, ವರ್ಣ, ವರ್ಗ, ಲಿಂಗಭೇದಗಳು ಸಮಾಜದಲ್ಲಿ ಇನ್ನೂ ಮುಂದುವರಿದಿವೆ ಎಂದು ಸೂಚಿಸಿದ ಅವರು, ತಾರತಮ್ಯ ಇದೆ ಎಂದು ಹೇಳುವುದಕ್ಕಿಂತಲೂ ಅದು ಎಲ್ಲಿ, ಹೇಗೆ ಇದೆ ಎನ್ನುವುದನ್ನು ಪತ್ತೆಹಚ್ಚಿದಾಗ ಮಾತ್ರ ಮಾನವ ಹಕ್ಕುಗಳ ಚರ್ಚೆ ಫಲಪ್ರದವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸ್ತ್ರೀ ಸುನ್ನತ್, ಹೆಣ್ಣು ಶಿಶು ಹತ್ಯೆ ಮತ್ತು ಮಕ್ಕಳ ಮೇಲಿನ  ಲೈಂಗಿಕ ದೌರ್ಜನ್ಯಗಳಂತಹ ಗಂಭೀರ ಸಾಮಾಜಿಕ ಸಮಸ್ಯೆಗಳನ್ನು ಉದಾಹರಿಸಿ ಮಾನವ ಹಕ್ಕುಗಳು ಜಾರಿಗೊಂಡ ಸನ್ನಿವೇಶವನ್ನು ತಿಳಿಸಿದರು.

ಕಾನೂನಿನ ಮುಂದೆ ಸಮಾನತೆ ಎನ್ನುವುದೇ ಮಾನವ ಹಕ್ಕುಗಳ ಸಾರ. ‘ಈಕ್ವಿಟಿ’ ಮತ್ತು ‘ಈಕ್ವಾಲಿಟಿ’ ನಡುವಿನ ವ್ಯತ್ಯಾಸ ಅರಿತು ಸಮಾಜದ ಎಲ್ಲಾ ವರ್ಗಗಳು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು. ಸ್ಟ್ಯಾಂಡರ್ಡ್ ಆಫ್ ಲೈಫ್ ಮತ್ತು ವೇ ಆಫ್ ಲೈಫ್ ನಡುವಿನ ಭೇದವನ್ನು ವಿವರಿಸಿದ ಅವರು, ಜೀವನದ ಗುಣಮಟ್ಟದಿಂದಾಗಿ ಮನುಷ್ಯನ ಜೀವನದ ದೃಷ್ಟಿಕೋನ ನಿರ್ಮಾಣಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಮಾನವೀಯ ಮೌಲ್ಯಗಳ ಅರಿವು ಮತ್ತು ಸಂವೇದನೆ ವಿದ್ಯಾರ್ಥಿಗಳಲ್ಲಿ ಬೆಳೆಸುವುದೇ ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶ ಎಂದು ಹೇಳಿದರು.

ಮಾನವ ಹಕ್ಕುಗಳ ಕೋಶದ ಸಂಚಾಲಕ ಕೃಷ್ಣಮೂರ್ತಿ ಬಿ., ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಬಾಲ ಕೆ., ಮಾನವಿಕ  ವಿಭಾಗದ ಡೀನ್ ಸಂಧ್ಯಾ ಕೆ.ಎಸ್., ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥೆ ಅಶ್ವಿನಿ ಕೆ., ಎನ್‌ಸಿಸಿ ಅಧಿಕಾರಿಗಳಾದ ಧನಂಜಯ ಆಚಾರ್ಯ, ಕಾರ್ತಿಕ್ ನಾಯ್ಕ, ಎನ್‌ಎಸ್‌ಎಸ್ ಅಧಿಕಾರಿಗಳಾದ ಸುದೀಪ್ ಹಾಗೂ ಅಕ್ಷತಾ ಪ್ರಭು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here