ಉಜಿರೆ: ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ 37ನೇ ಶಿಶ್ಯೋಪನಯನ ಕಾರ್ಯಕ್ರಮ-150 ನೂತನ ವಿದ್ಯಾರ್ಥಿಗಳಿಂದ ದೀಕ್ಷೆ ಸ್ವೀಕಾರ-ಧರ್ಮ ಎಂದರೆ ಸಾತ್ವೀಕತೆ ಮತ್ತು ಮಾನವೀಯತೆ: ಡಾ. ಆರ್.‌ ರಂಗನ್

0

ಉಜಿರೆ: ಶಿಕ್ಷಣ ಎಂಬುವುದು ಕೇವಲ ಪುಸ್ತಕದ ಪಠ್ಯವಲ್ಲ, ಅದು ನಮ್ಮ ಬದುಕನ್ನು ಶಿಸ್ತು ಬದ್ಧ, ನೀತಿ ಬದ್ಧ, ಕರ್ಮ ಬದ್ಧ ಮತ್ತು ಸಾಂಸ್ಕೃತಿಕ ಬದ್ಧವಾಗಿ ನಿರೂಪಿಸುವ ಶಕ್ತಿ. ಧಾರ್ಮಿಕ ಮಂತ್ರಗಳಲ್ಲಿ ಆದರ್ಶ ಜೀವನ ಮತ್ತು ಯಶಸ್ಸಿನ ಹಾದಿಯನ್ನು ಉಪದೇಶಿಸುವ ಸಾಮರ್ಥ್ಯವಿದೆ. ಆಧ್ಯಾತ್ಮ ಮತ್ತು ಧರ್ಮ ಎಂದರೆ ಆಚರಣೆಯಲ್ಲ, ಅದು ಸಾತ್ವೀಕತೆ ಮತ್ತು ಮಾನವೀಯತೆ ಎಂದು ಬೆಂಗಳೂರಿನ ಆಧ್ಯಾತ್ಮ ಗುರು, ಆಧ್ಯಾತ್ಮ ಯೋಗ ಅಕಾಡೆಮಿಯ ಸಂಚಾಲಕ ಡಾ. ಆರ್. ರಂಗನ್ ಅಭಿಪ್ರಾಯಪಟ್ಟರು.

ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ಸಭಾಂಗಣದಲ್ಲಿ ಆಯೋಜಿಸಿದ್ದ 37ನೇ ಸಾಲಿನ ಶಿಶ್ಯೋಪನಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾತ್ವಿಕತೆಯ ಸಕಾರಾತ್ಮಕ ಯೋಚನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಜೊತೆಗೆ ಸಾಮಾಜಿಕ ಚಿಂತನೆಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಜನೆಯಿಂದ ಹಂತ ಹಂತವಾಗಿ ವಿಕಸನಗೊಳ್ಳಬೇಕು. ಈ ಮೂಲಕ ನಮ್ಮೊಳಗಿನ ಪ್ರತಿಭೆ, ಕೌಶಲ್ಯ, ಸಾಮರ್ಥ್ಯಗಳೆಲ್ಲವು ಬೆಳಕಿಗೆ ಬರಬೇಕು. ಸತತ ಪ್ರಯತ್ನ ಮತ್ತು ನಿರಂತರತೆಯಿಂದ ಉಜ್ವಲ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಸುಜಾತಾ ಕೆ.ಜೆ. ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಪ್ರೇರಣೆಯಿಂದಾಗಿ ಈ ಕಾರ್ಯಕ್ರಮ ಪ್ರತಿ ವರ್ಷ ಆಚರಿಸಿಕೊಂಡು ಬಂದಿದ್ದೇವೆ. ವಿದ್ಯಾರ್ಥಿಗಳು ಶಿಸ್ತು ಮತ್ತು ನಿಯಮಗಳ ನಡುವೆ ನಡೆದಾಗ ಯಶಸ್ಸಿನ ಹಾದಿ ತಲುಪಲು ಸಾಧ್ಯವಾಗುತ್ತದೆ. ಪ್ರಯತ್ನ ಶೀಲತೆಯಿಂದ ಜ್ಞಾನವಂತರಾಗಿ ಎಂದರು.

ಕಾರ್ಯಕ್ರಮದಲ್ಲಿ ಅತಿಥಿ ದಂಪತಿಗಳನ್ನು ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಸುಜಾತಾ ಕೆ.ಜೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮತ್ತು ಉಜಿರೆಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

150 ನೂತನ ವಿದ್ಯಾರ್ಥಿಗಳಿಂದ ದೀಕ್ಷೆ ಸ್ವೀಕಾರ: ಕಾರ್ಯಕ್ರಮದಲ್ಲಿ 37ನೇ ಸಾಲಿನ ಪದವಿ ಮತ್ತು 16 ನೇ ಸಾಲಿನ ಸ್ನಾತಕೋತ್ತರ ಪದವಿಗೆ ನೂತನವಾಗಿ ಸೇರ್ಪಡೆಗೊಂಡ 150 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೂ ನೀಡುವ ಮೂಲಕ ಕಾಲೇಜಿಗೆ ಸ್ವಾಗತಿಸಲಾಯಿತು. ಬಳಿಕ ಪ್ರತಿಯೊಬ್ಬರ ಕೈಗೆ ಪಾವಿತ್ರ್ಯತೆಯ ದೀಕ್ಷೆಯ ನೂಲನ್ನು ಕಟ್ಟಲಾಯಿತು.

ಸಂಕಲ್ಪಗಳ ಪ್ರಮಾಣ ವಚನ ಸ್ವೀಕಾರ: ಕಾಲೇಜಿನ ಸರ್ವರ ಸಮ್ಮುಖದಲ್ಲಿ ನಾವು ನಮ್ಮ ಎಲ್ಲಾ ಆಂತರಿಕ ಶತ್ರುಗಳನ್ನು ಜಯಿಸುತ್ತೇವೆ. ಸಾರ್ವತ್ರಿಕ ಸಹೋದರತ್ವದ ಪರಿಕಲ್ಪನೆಗೆ ನಾವು ಬದ್ಧರಾಗಿದ್ದೇವೆ.
ನಾವು ಸರಿಯಾಗಿ, ಅಪಾರ ನಂಬಿಕೆ ಮತ್ತು ಬದ್ಧತೆಯಿಂದ ಅಧ್ಯಯನ ಮಾಡುತ್ತೇವೆ. ಕಾಲೇಜಿನ ಪಾವಿತ್ರ್ಯತೆ ಮತ್ತು ಶಿಸ್ತನ್ನು ನಾವು ಗೌರವಿಸುತ್ತೇವೆ. ನಾವು ಉತ್ತಮ ಸ್ವಭಾವ ಮತ್ತು ನಮ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ವೈಯಕ್ತಿಕವಾಗಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಪ್ರತಿಜ್ಞೆ ಮಾಡುತ್ತೇವೆ. ನಾವು ಯಾವಾಗಲೂ ನಮ್ಮ ಶಿಕ್ಷಕರು ಮತ್ತು ಹಿರಿಯರನ್ನು ಗೌರವಿಸುತ್ತೇವೆ. ನಾವು ಎಂದಿಗೂ ಆಹಾರವನ್ನು ಹೊರಗೆ ಎಸೆಯುವುದಿಲ್ಲ ಮತ್ತು ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸುತ್ತೇವೆ. ಕಾಲೇಜಿನ ಘನತೆ ಮತ್ತು ನಮ್ಮ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಿದ್ಧಾಂತವನ್ನು ಎತ್ತಿಹಿಡಿಯುತ್ತೇವೆ ಎಂದು ಪ್ರಮಾಣವಚನ ಸ್ವೀಕರಿಸಿದರು. ಡಾ. ಸುಜಾತಾ ಕೆ.ಜೆ. ಸಂಕಲ್ಪ ಪ್ರಮಾಣ ವಚನವನ್ನು ಬೋಧಿಸಿದರು.

ಧನ್ವಂತರಿ ಸಂಕಲ್ಪಾ ಹೋಮ: ಇದೇ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಸರ್ವರ ಸಮ್ಮುಖದಲ್ಲಿ ಮುಂಜಾನೆ ಧನ್ವಂತರಿ ಯಜ್ಞಾ ನಡೆಯಿತು. ಬೆಂಗಳೂರಿನ ಆಧ್ಯಾತ್ಮ ಗುರು, ಆಧ್ಯಾತ್ಮ ಯೋಗ ಅಕಾಡೆಮಿಯ ಸಂಚಾಲಕ ಡಾ. ಆರ್. ರಂಗನ್ ಸೇರಿದಂತೆ ಹಲವು ಪೂಜಾ ಪಂಡಿತರು ಯಜ್ಞವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು , ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿ, ನ್ಯುಟ್ರೀಷನ್ ವಿಭಾಗದ ಡೀನ್ ಡಾ.ಬಿ. ಗೀತಾ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಜಿರೆಯ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಬಂಧಕ ಪ್ರಧಾನ್ ಕುಮಾರ್ ಕಾರ್ಯಕ್ರಮವನ್ನು ಸಂಯೋಜಿಸಿದರು. ವಿದ್ಯಾರ್ಥಿನಿ ಪ್ರಾಂಜಲೀ ಬಿ. ಪಂಡಿತ್ ನಿರೂಪಿಸಿ, ಉಪನ್ಯಾಸಕ ಡಾ. ಬಾಲಕೃಷ್ಣ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here