ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆ: ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ವಿಭಾಗದ ವಾರ್ಷಿಕ ಕ್ರೀಡಾಕೂಟ

0

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ಎಲ್‌.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಎಲ್. ಕೆ.ಜಿ, ಯು.ಕೆ.ಜಿ ಹಾಗೂ ಕಿರಿಯ ಪ್ರಾಥಮಿಕ ವಿಭಾಗದ ವಾರ್ಷಿಕ ಕ್ರೀಡೋತ್ಸವವನ್ನು ಡಿ.3ರಂದು ಎಲ್. ಸಿ. ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ನಡೆಸಲಾಯಿತು.

ವಿದ್ಯಾಸಂಸ್ಥೆಯ ಸಹಶಿಕ್ಷಕಿಯರಾದ ಪವಿತ್ರ ಹಾಗೂ ಅಖಿಲಾರವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡು, ವಿದ್ಯಾರ್ಥಿ ನಾಯಕರು ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸುವುದರೊಂದಿಗೆ, ಪುಟ್ಟ ಮಕ್ಕಳ ಚಿಗುರು ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುವ ಸದುದ್ದೇಶವನ್ನು ಇಟ್ಟುಕೊಂಡು ಬಣ್ಣ ಬಣ್ಣದ ಬಲೂನುಗಳ ಆಕರ್ಷಕ ಚಿತ್ತಾರದ ಮೂಲಕ ಸಂಸ್ಥೆಯ ಪ್ರಾಂಶುಪಾಲರು, ಸಂಯೋಜಕರು ಮುಖ್ಯ ಶಿಕ್ಷಕಿ ಹಾಗೂ ದೈಹಿಕ ಶಿಕ್ಷಕಿಯವರು ಕಾರ್ಯಕ್ರಮದ ಉದ್ಘಾಟನೆ ಮೂಲಕ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು.

ಸಂಸ್ಥೆಯ ಪ್ರಾಂಶುಪಾಲ ಜೋಸ್ಟಾನ್ ಲೋಬೋ ಮಾತನಾಡಿ ಆಟಗಳು ದೇಹಕ್ಕೆ ಮತ್ತು ಮನಸ್ಸಿಗೆ ಉಲ್ಲಾಸ ಮತ್ತು ಮುದವನ್ನು ನೀಡುತ್ತವೆ ಎಲ್ಲಾ ಮಕ್ಕಳು ಎಳವೆಯಲ್ಲಿಯೇ ಕ್ರೀಡಾ ಸ್ಫೂರ್ತಿಯನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿಹೇಳಿದರು. ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಾ ಕೆ ಮಾತನಾಡಿ ಆಟಗಳು ಮಕ್ಕಳಲ್ಲಿ ಕ್ರೀಡಾ ಮನೋಭಾವ ಹಾಗೂ ಧೈರ್ಯವನ್ನುತುಂಬುತ್ತವೆ. ಉತ್ಸಾಹದಿಂದ ಆಟಗಳನ್ನು ಆಡಿ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸಿದರು. ಸಂಸ್ಥೆಯ ಸಂಯೋಜಕ ಯಶವಂತ್ ಜಿ ನಾಯಕ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಹರಿಣಾಕ್ಷಿ ಜಿ.ಕೆ. ವಿದ್ಯಾರ್ಥಿಗಳಿಗೆಲ್ಲರಿಗೂ ಶುಭಹಾರೈಸಿದರು.

ತದನಂತರ ಮನರಂಜನಾ ಕಾರ್ಯಕ್ರಮವಾಗಿ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಂದ ಬಣ್ಣ ಬಣ್ಣದ ಚಿತ್ತಾರಗಳೊಂದಿಗೆ ಮನಮೋಹಕ ನೃತ್ಯ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪ್ರಶಸ್ತಿಪದಕ ನೀಡಿ ಅಭಿನಂದಿಸಲಾಯಿತು. ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರ ಸಹಕಾರದೊಂದಿಗೆ ಕ್ರೀಡಾಕೂಟವು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಬೋಧಕೇತರ ವೃಂದದವರು ಹಾಗೂ ಪೋಷಕರು ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆಲ್ಲರಿಗೂ ಸಹಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

ಭಾಗವಹಿಸಿದ ಎಲ್ಲಾ ಗಣ್ಯರನ್ನು ಸಂಸ್ಥೆಯ ಸಹಶಿಕ್ಷಕಿ ಲಾವಣ್ಯ ಸ್ವಾಗತಿಸಿ, ಪ್ರಿಯತ ನಿರೂಪಿಸಿ, ವಿದ್ಯಾರ್ಥಿ ನಾಯಕಿ ವಂದಿಸಿದರು.

LEAVE A REPLY

Please enter your comment!
Please enter your name here