ಡಿ. 6,7,8: ಕುಪ್ಪೆಟ್ಟಿ ಉರುವಾಲು ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾ ಗಣೇಶ ಸಭಾಭವನ ಲೋಕಾರ್ಪಣೆ

0

ಬೆಳ್ತಂಗಡಿ: ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟಿಯ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾ ಗಣೇಶ ಸಭಾಭವನ ಲೋಕಾರ್ಪಣಾ ಸಮಾರಂಭವು ಡಿ. 6,7,8 ರಂದು, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

36 ವರ್ಷಗಳ ಹಿಂದೆ ಪ್ರಕೃತಿ ಸೌಂದರ್ಯದಿಂದ ಕೂಡಿದ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕುಪ್ಪೆಟ್ಟಿ ಪ್ರದೇಶದಲ್ಲಿ ಶ್ರೀ ಗಣೇಶ ಭಜನಾ ಮಂಡಳಿಯನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಸರ್ಕಾರಿ ಶಾಲಾ ವಠಾರದಲ್ಲಿ ಭಜನೆ ನಡೆಯುತ್ತಿದ್ದು, ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಎಸ್. ಕೆ. ಡಿ. ಆರ್. ಡಿ. ಪಿ. ಯ ಮಾರ್ಗದರ್ಶನದಿಂದ ಹಾಗೂ ಜನರ ಸಹಕಾರದಿಂದ ನಿಧಿ ಸಂಗ್ರಹ ನಡೆದು, ದಿ.ಚಂದ್ರಾವತಿ ಬಾಲಚಂದ್ರ ಬಂಗೇರ ದಂಪತಿಯ ಪುತ್ರ ಜಯರಾಮ್ ಬಂಗೇರ ಮಾಲ್ದಡ್ಕ ಇವರಿಂದ ದಾನವಾಗಿ ಪಡೆದ ಸುಮಾರ್ 8 ಸೆಂಟ್ಸ್ ಜಾಗದಲ್ಲಿ ಮಂದಿರ ನಿರ್ಮಿಸಲಾಯಿತು. ಸುಮಾರು ಮೂವತ್ತಾರು ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಇಲ್ಲಿ ಶ್ರೀ ಮಹಾಗಣಪತಿ ದೇವರನ್ನು ಪ್ರಧಾನ ಆರಾಧ್ಯ ದೇವರಾಗಿ ಪೂಜಿಸಲಾಗುತ್ತಿದೆ. ಇದೇ ಸ್ಥಳದಲ್ಲಿ ಶ್ರೀ ಗುಳಿಗೆ ದೈವದ ಆರಾಧನೆಯೂ ನಡೆಯುತ್ತದೆ.

ಶ್ರೀಗಣೇಶ ಭಜನಾ ಮಂದಿರದಲ್ಲಿ ಭಜನಾ ಸೇವೆಯೇ ಮುಖ್ಯವಾಗಿ ನಡೆಯುತ್ತದೆ. ಪ್ರತಿ ಮಂಗಳವಾರ ಭಜನೆ ಮತ್ತು ಅನ್ನದಾನ ಸೇವೆಯನ್ನು ನಡೆಸಲಾಗುತ್ತಿದೆ. ಮಂಗಳವಾರದಂದು ಸಾಯಂಕಾಲ ಊರಿನ ಭಜನಾರ್ಥಿಗಳು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ನಿರಂತರವಾಗಿ ಭಜನಾ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. 27 ಸೆಂಟ್ಸ್ ಜಾಗ ಖರೀದಿಸಿ ಸಭಾಭವನ ನಿರ್ಮಾಣ ಮಂದಿರದ ಅಭಿವೃದ್ಧಿಗಾಗಿ 2021ರಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಲಾಯಿತು., ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಸುಮಾರು 27 ಸೆಂಟ್ಸ್ ಜಾಗವನ್ನು ಖರೀದಿಸಿ ಭಜನಾ ಮಂದಿರ ರಾಜಗೋಪುರ ಮತ್ತು ಗ್ರಾಮಸ್ಥರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಪಯುಕ್ತವಾಗುವ ಶ್ರೀ ದುರ್ಗಾಗಣೇಶ ಸಭಾಭವನವನ್ನು 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದರು.

ಡಿ. 6ರಂದು ವೇದಮೂರ್ತಿ ಪ್ರಸನ್ನ ಮುಚ್ಚಿನ್ನಾಯರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಗಣೇಶ ಮಂದಿರದ ನೂತನ ರಾಜಗೋಪುರ ಹಾಗೂ ದುರ್ಗಾಗಣೇಶ ಸಭಾಭವನದ ಲೋಕಾರ್ಪಣೆ ನಡೆಯಲಿದೆ. ಶಾಸಕ ಹರೀಶ್ ಪೂಂಜರ ಗೌರವಾಧ್ಯಕ್ಷತೆಯಲ್ಲಿ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾರವರ ಅಧ್ಯಕ್ಷತೆಯಲ್ಲಿ, ಅತುಲ್ ಕುಮಾರ್ ಕೆ ಎನ್ ಹಲೇಜಿಯವರ ಹಾಗೂ ಕಿರಣ್ ಚಂದ್ರ ಡಿ ಪುಷ್ಪಗಿರಿಯವರ ಕಾರ್ಯಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಸಂಜೆ ಮೂರುಗಂಟೆಗೆ ಹೊರೆಕಾಣಿಕೆಯ ಉದ್ಘಾಟನೆಯನ್ನು ಆರಿಕೋಡಿ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಹರೀಶ್ ಆರಿಕೋಡಿ ನೆರವೇರಿಸಲಿದ್ದಾರೆ. ಕಾರ್ಯಾಲಯದ ಉದ್ಘಾಟನೆ ರೈತಬಂಧು ಸಂಸ್ಥೆಯ ಮಾಲಕ ಶಿವಶಂಕರ್ ನೆರವೇರಿಸಲಿದ್ದಾರೆ. ಉಗ್ರಾಣವನ್ನು ಸತ್ಯಧರ್ಮ ಚಾವಡಿ ಮನೆಯ ಅಧ್ಯಕ್ಷ ಜನಾರ್ಧನ ಪೂಜಾರಿ ಕಡ್ತಿಲ ನಡೆಸಿಕೊಡಲಿದ್ದಾರೆ. ಸಂಜೆ 5ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಾಣಿಲ ಶ್ರೀಗಳು ಆಶೀರ್ವಚನ ನೀಡಲಿದ್ದು, ಕಾರ್ಯಕ್ರಮದ ಉದ್ಘಾಟನೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಅಧ್ಯಕ್ಷತೆ ಶಾಸಕ ಹರೀಶ್ ಪೂಂಜ ವಹಿಸಿಕೊಳ್ಳಲಿದ್ದಾರೆ. ಧಾರ್ಮಿಕ ಭಾಷಣವನ್ನು ರವೀಶ್ ಪಡುಮಲೆ ಮಾಡಲಿದ್ದಾರೆ. ಆರರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಲಾಕುಂಭ ಕುಳಾಯಿ ಕುಡ್ಲ ತಂಡದಿಂದ ಪರಮಾತ್ಮೆ ಪಂಜುರ್ಲಿ ಕಾರ್ಯಕ್ರಮ ನಡೆಯಲಿದೆ.

ಡಿ.7ರಂದು ಮೈಸೂರು ಸಂಸ್ಥಾನದ ಮಹರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮನ: ಡಿ. 7ರಂದು ಸಾಯಂಕಾಲ 6 ಗಂಟೆಗೆ ಭಜನಾ ಮಂದಿರದ ನೂತನ ರಾಜಗೋಪುರ ಲೋಕಾರ್ಪಣೆಯನ್ನು ಮೈಸೂರು ಸಂಸ್ಥಾನದ ಮಹರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಲಿದ್ದಾರೆ. ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನರವರು ಶ್ರೀ ದುರ್ಗಾ ಗಣೇಶ ಸಭಾಭವನ ಉದ್ಘಾಟನೆ ನೆರವೇರಿಸಲಿದ್ದಾರೆ. ಇದಕ್ಕೂ ಮೊದಲು ಮಹಾರಾಜರಿಗೆ ಪೂರ್ಣಕುಂಭ ಸ್ವಾಗತ ಮತ್ತು ವೈಭವದ ಮೆರವಣಿಗೆ ನಡೆಯಲಿದೆ.ಸಾಯಂಕಾಲ 6.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ದೀಪ ಪ್ರಜ್ವಲನೆಯನ್ನು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಲಿದ್ದಾರೆ. ಧಾರ್ಮಿಕ ಭಾಷಣವನ್ನು ಡಾ.ಪ್ರಭಾಕರ ಭಟ್ ಕಲ್ಲಡ್ಕ ನಿರ್ವಹಿಸಲಿದ್ದು, ಶಶಿಧರ್ ಶೆಟ್ಟಿ ಬರೋಡಾರ ಅಧ್ಯಕ್ಷತೆಯನ್ನು ಕಾರ್ಯಕ್ರಮ ನಡೆಯಲಿದೆ.

ಡಿ.8ರಂದು ಶ್ರೀದೇವಿ ಮಹಾತ್ಮೆ ಯಕ್ಷಗಾನ: ಡಿ. 8ರಂದು ಸಾಯಂಕಾಲ 5 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ತನ್ನೊಜಿ ಮಹಾಲಿಂಗೇಶ್ವರ ದೇವಸ್ಥಾನ ಹಲೇಜಿಯ ಅಧ್ಯಕ್ಷರಾದ ಅತುಲ್ ಕೆ. ಎನ್. ದೀಪ ಪ್ರಜ್ವಲನೆ ಮಾಡಲಿದ್ದು, ಕುದ್ರೋಳಿ ಶ್ರೀ ನಾರಾಯಣಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ವಹಿಸಿಕೊಳ್ಳಲಿದ್ದಾರೆ. ತದಬಳಿಕ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ,ನಾಗವೃಜ ಕ್ಷೇತ್ರ, ಪಾವಂಜೆ ಇವರಿಂದ ದಿವಂಗತ ಶ್ರೀದೇವಿ ಪುಷ್ಪಗಿರಿ ಯವರ ಸ್ಮರಣಾರ್ಥ ಕಿರಣ್ ಚಂದ್ರ ಪುಷ್ಪಗಿರಿ ಪ್ರಾಯೋಜಕತ್ವದಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.

ಅರ್ಧಏಕಾಹ ಭಜನಾ ಕಾರ್ಯಕ್ರಮ-ಚಂಡಿಕಾಯಾಗ: ಡಿ.6ರಿಂದ 8ರವರೆಗೆ ಪ್ರತಿದಿನ ವಿವಿಧ ಭಜನಾಮಂಡಳಿಗಳ ಸಹಕಾರದೊಂದಿದೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಅರ್ಧಏಕಾಹ ಭಜನಾ ಕಾರ್ಯಕ್ರಮ ನಡೆಯಲಿದೆ. ಡಿ.7ರಂದು ಶಿಖರ ಪ್ರತಿಷ್ಠೆ, ಶಿಖರ ಕಲಾಶಾಭಿಷೇಕ, ಯಾಗಮಂಟಪದಲ್ಲಿ ಅಥರ್ವಶೀರ್ಷ ಗಣಯಾಗ ನಡೆಯಲಿದೆ.ಡಿ. 8ರಂದು ಬೆಳಗ್ಗೆ 6ರಿಂದ ಮಹಾಚಂಡಿಕಾಯಾಗ ಮತ್ತು 108 ತೆಂಗಿನಕಾಯಿ ಗಣಯಾಗ ನಡೆಯಲಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here