ಮಂಗಳೂರಿನಲ್ಲಿ ಯುವಕನಿಗೆ ತಲ್ವಾರ್‌ನಿಂದ ಹಲ್ಲೆ-ವೇಣೂರಿನ ಇರ್ಷಾದ್ ಸಹಿತ ನಾಲ್ವರ ಬಂಧನ

0

ಬೆಳ್ತಂಗಡಿ: ಸ್ಕೂಟರ್‌ನಲ್ಲಿ ಬಂದ ನಾಲ್ವರು ಯುವಕರ ತಂಡ ಯುವಕನೊಬ್ಬನ ಮೇಲೆ ತಲ್ವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಸೋಮವಾರ ಸಂಜೆ ವೇಳೆ ಮಂಗಳೂರಿನ ಎಡಪದವು ಬಳಿ ನಡೆದಿದೆ. ಎಡಪದವಿನ ಪೂಪಾಡಿಕಲ್ಲು ಆರೆಕೋಡಿ ನಿವಾಸಿ ಅಖಿಲೇಶ್ (೨೨) ಗಾಯಗೊಂಡವರಾಗಿದ್ದು ಘಟನೆಗೆ ಸಂಬಂಧಿಸಿ ಪೊಲೀಸರು ವೇಣೂರಿನ ಇರ್ಷಾದ್(೨೫) ವಾಮಂಜೂರಿನ ಸಾಹಿಲ್ ಅಕ್ರಂ(೨೫), ನಿಸಾನ್(೨೨) ಮತ್ತು ಮಂಗಳೂರು ಬಂದರು ನಿವಾಸಿ ಶಿನಾನ್(೨೨) ಎಂಬವರನ್ನು ಬಂಧಿಸಿದ್ದಾರೆ. ಎಡಪದವಿನ ಹನುಮಾನ್ ಮಂದಿರದ ಬಳಿ ಸಂಜೆ ೪ರಿಂದ ೪.೧೫ರ ನಡುವೆ ಘಟನೆ ನಡೆದಿದೆ. ಅಖಿಲೇಶ್ ಅವರ ಬಲ ಮೊಣಕೈಗೆ ತಲವಾರಿನ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು ಅಪಾಯದಿಂದ ಪಾರಾಗಿದ್ದಾರೆ. ಅಖಿಲೇಶ್ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದು ಹಿಂದೂ ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದರು. ಮೂಡುಬಿದಿರೆ ಕಡೆಯಿಂದ ಒಂದೇ ಸ್ಕೂಟರ್‌ನಲ್ಲಿ ನಾಲ್ವರು ಬರುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಅಖಿಲೇಶ್ ಅವರನ್ನು ನೋಡಿ ಹಿಂಬಾಲಿಸಿಕೊಂಡು ವೀಡಿಯೋ ಮಾಡಿದ್ದರು. ಈ ವೇಳೆ ಅವರು ತಮ್ಮಲ್ಲಿದ್ದ ತಲವಾರು ಝಳಪಿಸಿದ್ದು ಅಖಿಲೇಶ್ ಮೇಲೆ ಬೀಸಿದ್ದಾರೆ. ಇದರಿಂದ ಅವರ ಮೊಣಕೈಗೆ ಗಾಯವಾಗಿದೆ. ಈ ವೇಳೆ ಒಬ್ಬ ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದು ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನಿಗೂ ಗಾಯವಾಗಿದೆ.

ಬಳಿಕ ಉಳಿದ ಮೂವರನ್ನು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಬಜಪೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಚೀಲದೊಳಗೆ ಒಂದು ಚೂರಿ, ಒಂದು ತಲವಾರು ಪತ್ತೆಯಾಗಿದ್ದು ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಬಾರೊಂದರಿಂದ ಹೊರ ಬರುವ ಸಿಸಿ ಕೆಮರಾ ವೀಡಿಯೋ ಲಭ್ಯವಾಗಿದೆ. ಬಂಧಿತರು ಬೈಕ್ ಕಳವು ಪ್ರಕರಣದ ಆರೋಪಿಗಳಾಗಿದ್ದು ಕೆಲವು ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದರು ಎಂದು ತಿಳಿದು ಬಂದಿದೆ.

ಹಣ ಕೊಡಲು ಬಾಕಿ ಇತ್ತು: ವೇಣೂರಿನ ಪ್ರಶಾಂತ್ ಎಂಬವರು ಆರೋಪಿಗಳಲ್ಲಿ ಒಬ್ಬನಾದ ವೇಣೂರಿನ ಇರ್ಷಾದ್‌ಗೆ ೧೦ ಸಾವಿರ ರೂ ಹಣ ಕೊಡಲು ಬಾಕಿ ಇತ್ತು. ಹಣ ಕೊಡುವಂತೆ ಕರೆ ಮಾಡಿದಾಗ ಪ್ರಶಾಂತ್ ಕೊಡುವುದಿಲ್ಲ ಎಂದು ಹೇಳಿದ್ದರು. ಕೊನೆಗೆ ಮೂಡುಬಿದಿರೆಗೆ ಬರುವಂತೆ ಇರ್ಷಾದ್‌ಗೆ ಪ್ರಶಾಂತ್ ತಿಳಿಸಿದ್ದರು. ಅದರಂತೆ ಇರ್ಷಾದ್ ಇತರ ಮೂವರ ಜತೆ ಮೂಡುಬಿದಿರೆಗೆ ತೆರಳಿದ್ದಾನೆ. ಅಲ್ಲಿ ಪ್ರಶಾಂತ್ ಸಿಕ್ಕಿಲ್ಲ. ವಾಪಸ್ ಬರುವಾಗ ಅವರ ಕೈಯಲ್ಲಿ ತಲವಾರು ಇರುವುದನ್ನು ನೋಡಿ ಅಖಿಲೇಶ್ ವಿಡಿಯೋ ಮಾಡಿದ್ದಾರೆ. ಇದನ್ನು ನೋಡಿದ ಆರೋಪಿಗಳು ಎಡಪದವಿನಲ್ಲಿ ವಾಹನ ನಿಲ್ಲಿಸಿ ಗಲಾಟೆ ಮಾಡಿ ತಲವಾರು ಬೀಸಿದ್ದಾರೆ. ಇದರಿಂದ ಅಖಿಲೇಶ್ ಮೊಣಕೈಗೆ ಗಾಯವಾಗಿದೆ. ಆರೋಪಿಗಳ ಪೈಕಿ ಸಾಹಿಲ್ ಅಕ್ರಂ ಮತ್ತು ನಿಸಾನ್ ಕೈಯಲ್ಲಿ ಗಾಂಜಾ ಪತ್ತೆಯಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿಯೂ ಇವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here