




ಬೆಳ್ತಂಗಡಿ: ಭಾರತದಲ್ಲಿ ದಶಕಗಳಷ್ಟು ಕಾಲ ಜಾರಿಯಲ್ಲಿದ್ದ ೨೯ ಕಾರ್ಮಿಕ ಕಾನೂನುಗಳನ್ನು ಸರಳಗೊಳಿಸಿ ಕಾರ್ಮಿಕರ ಹಿತಾಸಕ್ತಿ ಹಾಗೂ ಕೈಗಾರಿಕಾ ವಾತಾವರಣದ ಸುಧಾರಣೆಯನ್ನು ಗುರಿಯಿಟ್ಟುಕೊಂಡು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಭಾರತೀಯ ಮಜ್ದೂರು ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸ್ವಾಗತಿಸುತ್ತದೆ ಎಂದು ಬಿಯಂಎಸ್ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಅನಿಲ್ ಕುಮಾರ್ ಯು. ತಿಳಿಸಿದ್ದಾರೆ. ವೇತನ ಸಂಹಿತೆ (೨೦೧೯), ಕೈಗಾರಿಕಾ ಸಂಬಂಧ ಸಂಹಿತೆ (೨೦೨೦), ಸಾಮಾಜಿಕ ಭದ್ರತೆ ಸಂಹಿತೆ (೨೦೨೦) ಮತ್ತು ಔದ್ಯೋಗಿಕ ಸುರಕ್ಷತೆ-ಆರೋಗ್ಯ ಕೆಲಸದ ಪರಿಸ್ಥಿತಿಗಳ (೨೦೨೦)ಸಂಹಿತೆಗಳು ಕಾರ್ಮಿಕರ ಬದುಕಿನಲ್ಲಿ ನೇರವಾಗಿ ಚೈತನ್ಯ ತರುವಂತದು. ಹೊಸ ಸಂಹಿತೆಗಳು ಕಾರ್ಮಿಕರಿಗೆ ಹೆಚ್ಚಿನ ಭದ್ರತೆ ನೀಡುತ್ತವೆ. ಅಸಂಘಟಿತ ಹಾಗೂ ಗಿಗ್ ಕಾರ್ಮಿಕರಿಗೂ ಸಾಮಾಜಿಕ ಭದ್ರತಾ ವಲಯ ವಿಸ್ತಾರವಾಗುತ್ತದೆ. ವೇತನ, ಕೆಲಸದ ಸಮಯ, ಸುರಕ್ಷತೆ ಮತ್ತು ಕಾರ್ಮಿಕ ಕಲ್ಯಾಣಕ್ಕೆ ರಾಷ್ಟ್ರ ಮಟ್ಟದ ಸಾಮಾನ್ಯ ಮಾನದಂಡಗಳು ರೂಪಗೊಳ್ಳುತ್ತವೆ.


ಕೈಗಾರಿಕಾ ವಿವಾದಗಳನ್ನು ಕಡಿಮೆ ಮಾಡಿ ಉದ್ಯೋಗ ಸೃಷ್ಟಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ. ದೇಶದ ಕಾರ್ಮಿಕರಿಗೆ ನ್ಯಾಯ, ಭದ್ರತೆ ಮತ್ತು ಪಾರದರ್ಶಕತೆಯನ್ನು ಬಲಪಡಿಸುವ ಉzಶದಿಂದ ಜಾರಿಗೆ ತಂದಿರುವ ಹೊಸ ಕಾರ್ಮಿಕ ಸಂಹಿತೆಗಳು ದೇಶದ ಉದ್ಯೋಗ ಮಾರುಕಟ್ಟೆಗೆ ಹೊಸ ದಿಕ್ಕು ತೋರಲಿವೆ. ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುವ ಜೊತೆಗೆ ಕೈಗಾರಿಕೆಗಳ ಬೆಳವಣಿಗೆಗೂ ಪೂರಕವಾಗುವ ಈ ಸಂಹಿತೆಗಳನ್ನು ಭಾರತೀಯ ಮಜ್ದೂರು ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪೂರ್ಣ ಹೃದಯದಿಂದ ಸ್ವಾಗತಿಸುತ್ತದೆ. ಭಾರತೀಯ ಮಜ್ದೂರು ಸಂಘ ಮುಂದಿನ ದಿನಗಳಲ್ಲಿ ಈ ಸಂಹಿತೆಗಳ ಪರಿಣಾಮಕಾರಿ ಜಾರಿಗೆ ಕಾರ್ಮಿಕರ ಪರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡು ಅವುಗಳಿಂದ ಹೆಚ್ಚಿನ ಪ್ರಯೋಜನ ಪಡೆಯಲು ಸಹಕಾರ ನೀಡಲಿದೆ ಎಂದು ಅನಿಲ್ ಕುಮಾರ್ ಯು ತಿಳಿಸಿದ್ದಾರೆ.





