ಬೆಳ್ತಂಗಡಿಯ ವಕೀಲರ ಸಂಘದ ಮತದಾನ: 1.30ರ ವೇಳೆಗೆ 65% ಮತದಾನ

0

ಬೆಳ್ತಂಗಡಿ: ಬೆಳ್ತಂಗಡಿಯ ವಕೀಲರ ಸಂಘದ ಚುನಾವಣೆಯ ಕಾವು ಏರಿದೆ. ಘಟಾನುಘಟಿಗಳು ಸ್ಪರ್ಧೆಗೆ ಇಳಿದಿರುವುದರಿಂದ ಚುನಾವಣಾ ಕಣ ಜಿದ್ದಾಜಿದ್ದಿನಿಂದ ಕೂಡಿದ್ದು ಮಧ್ಯಾಹ್ನ 2 ಗಂಟೆಯ ವೇಳೆಗೆ 65% ಮತದಾನ ಆಗಿದ್ದು, ಜಿದ್ದಾ ಜಿದ್ದಿನ ಪೈಪೋಟಿ ಕಂಡುಬಂದಿದೆ. ಸಂಜೆ 4.30ರ ವೇಳೆಗೆ ಮತದಾನ ಪ್ರಕ್ರಿಯೆ ಮುಗಿಯಲಿದ್ದು 5 ಗಂಟೆಗೆ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲರಾದ ಅಲೋಶಿಯಸ್ ಎಸ್. ಲೋಬೊ ಮತ್ತು ಕೇಶವ ಪಿ. ಬೆಳಾಲು ನಡುವೆ ನೇರ ಹಣಾಹಣಿ ಉಂಟಾಗಿ, ತೀವ್ರ ಪೈಪೋಟಿ ಏರ್ಪಟ್ಟಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿದ್ದ ಶ್ರೀನಿವಾಸ ಗೌಡ ಬೆಳಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಯಾರೂ ಇಲ್ಲ: ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹರಿಪ್ರಕಾಶ್ ಪಿ.ಎನ್. ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧ ಆಯ್ಕೆ ಆಗುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಹರಿಪ್ರಕಾಶ್ ಪಿ.ಎನ್. ನಾಮಪತ್ರ ಹಿಂಪಡೆದಿದ್ದು ಆ ಸ್ಥಾನಕ್ಕೆ ಯಾರೂ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಹೊಸ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದ ಬಳಿಕ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗುತ್ತದೆ.

ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಹರ್ಷಿತ್ ಹೆಚ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿ ಸ್ಥಾನಕ್ಕೆ ಮುಮ್ತಾಜ್ ಬೇಗಂ ಮತ್ತು ಸುಜಾತ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ 15 ವರ್ಷಕ್ಕಿಂತ ಮೇಲ್ಪಟ್ಟು ಸದಸ್ಯತ್ವ ಹೊಂದಿದ ಅನುಭವವುಳ್ಳವರ ಚುನಾವಣೆಯಲ್ಲಿ ಶ್ರೀಕೃಷ್ಣ ಶೆಣೈ, ವಸಂತ ಮರಕಡ, ಸೇವಿಯರ್ ಪಾಲೇಲಿ ಅವಿರೋಧ ಆಯ್ಕೆಯಾಗಿದ್ದು ಹತ್ತು ವರ್ಷಕ್ಕಿಂತ ಮೇಲ್ಪಟ್ಟು 15ವರ್ಷದೊಳಗೆ ಸದಸ್ಯತ್ವ ಹೊಂದಿದ ಅನುಭವವುಳ್ಳವರ ಸ್ಪರ್ಧೆಯಲ್ಲಿ ಅಸ್ಮಾ, ದಿನೇಶ, ಧನಂಜಯ ಕುಮಾರ್ ಡಿ, ಮೂರು ವರ್ಷಕ್ಕಿಂತ ಮೇಲ್ಪಟ್ಟು ಹತ್ತು ವರ್ಷಕ್ಕಿಂತ ಒಳಗೆ ಸದಸ್ಯತ್ವ ಹೊಂದಿ ಅನುಭವವುಳ್ಳವರ ಸ್ಪರ್ಧೆಯಲ್ಲಿ ಉಷಾ ಎನ್.ಜಿ., ಸಂದೀಪ್ ಡಿಸೋಜ, ಲತಾಶ್ರೀ ಎ., ಸೌಮ್ಯ ಪಿ. ಮತ್ತು ಪ್ರಮೀಳಾ ಶೆಟ್ಟಿ ಕಣದಲ್ಲಿದ್ದಾರೆ.

ಮುಖ್ಯ ಚುನಾವಣಾಧಿಕಾರಿಯಾಗಿ ಹಿರಿಯ ವಕೀಲ ಬದರಿನಾಥ ಎಂ. ಸಂಪಿಗೆತ್ತಾಯ ಕಾರ್ಯ ನಿರ್ವಹಿಸುತ್ತಿದ್ದು ವಕೀಲರಾದ ಚಿದಾನಂದ ಪೂಜಾರಿ, ಆನಂದ್ ಕುಮಾರ್ ಎಮ್‌ಸಿ ಮತ್ತು ಜೋಬಿ ಜಾಯ್ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 137 ವಕೀಲ ಸದಸ್ಯರು ಮತದಾನ ಮಾಡಲು ಅರ್ಹತೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here