


ಬೆಳ್ತಂಗಡಿ :ಕರ್ನಾಟಕ ರಾಜ್ಯ”ಮಿನಿ ಒಲಿಂಪಿಕ್“ ಹದಿನಾಲ್ಕು ವರ್ಷದ ಕೆಳಗಿನ ವಯೋಮಿತಿಯ ಪಂದ್ಯಾಕೂಟದಲ್ಲಿ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾರ್ಥಿ ಶಿಶಿರ್ ಜಯವಿಕ್ರಮ್ ನಾಯಕತ್ವದ ದಕ್ಷಿಣ ಕನ್ನಡ ವಾಲಿಬಾಲ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.


ನ.5ರಿಂದ 7 ರವರೆಗೆ ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ “ಮಿನಿ ಒಲಿಂಪಿಕ್ “ಕ್ರೀಡಾಕೂಟದಲ್ಲಿ ರಾಜ್ಯದ ಎಂಟು ಪ್ರತಿಷ್ಠಿತ ತಂಡಗಳಾದ ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಹಾಸನ, ಕಲಬುರ್ಗಿ, ಉತ್ತರ ಕನ್ನಡ, ಕೋಲಾರ, ಬಳ್ಳಾರಿ ತಂಡಗಳನ್ನು ಒಳಗೊಂಡ ಲೀಗ್ ಮಾದರಿಯ ಪಂದ್ಯಾಕೂಟದಲ್ಲಿ ದಕ್ಷಿಣ ಕನ್ನಡ ತಂಡವು ಫೈನಲ್ ನ ಜಿದ್ದಾಜಿದ್ದಿನ ಐದು ಸೆಟ್ಟಿನ ಪಂದ್ಯದಲ್ಲಿ ಸತತ ಮೂರು ಸೆಟ್ಟನ್ನು ಗೆಲ್ಲುವ ಮೂಲಕ ಪ್ರಥಮ ಸ್ಥಾನವನ್ನು ಪಡೆದು ಟ್ರೋಫಿಯನ್ನು ತನ್ನದಾಗಿಸಿಕೊಂಡು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ತಂಡದ ಮುಖ್ಯ ಕೋಚ್ ಆಗಿ ನೆಲ್ಯಾಡಿಯ ಬೆಥನಿ ಶಾಲೆಯ ದೈಹಿಕ ಶಿಕ್ಷಕ ಮನೋಜ್ ಕಾರ್ಯ ನಿರ್ವಹಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರೀಯ ಆಟಗಾರ ಲಕ್ಷ್ಮೀನಾರಾಯಣ, ಜಾಗಿರ್ದಾರ್, ಬಸವರಾಜ ಮುಂಡಗೋಳ, ವಾಲಿಬಾಲ್ ಅಸೋಸಿಯೇಷನ್ ನ ಉಪಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.









