


ಬೆಳ್ತಂಗಡಿ: ನವೆಂಬರ್ ತಿಂಗಳ ಅಂತ್ಯಕ್ಕೆ ಅವಧಿ ಕೊನೆಗೊಳ್ಳಲಿರುವ ರಾಜ್ಯದ ೧೮೦ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿಯ ಅಂತಿಮ ಅಧಿಸೂಚನೆ ಹೊರಡಿಸಲು ೧೫೦ ದಿನಗಳ ಸಮಯ ಬೇಕಾಗುತ್ತದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಹೇಳಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ಚುನಾವಣೆ ವಿಳಂಬವಾಗಿ ನಡೆಯುವುದು ಬಹುತೇಕ ಖಚಿತವಾಗಿದೆ.
ಕಾಲಾವಕಾಶ ಕೇಳಿದ ಸರಕಾರ: ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ವಿಳಂಬವಾದ ಹಿನ್ನೆಲೆಯಲ್ಲಿ ೧೬ ತಿಂಗಳ ಕಾಲ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದ ಅವಧಿಯನ್ನು ೫ ವರ್ಷದ ಅಧಿಕಾರವಧಿಗೆ ಪರಿಗಣಿಸಬಾರದು, ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳ ನೇಮಕ ಮಾಡುವ ಕ್ರಮಕ್ಕೆ ಮುಂದಾಗಬಾರದು ಎಂದು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ೬೫ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನ.೩ರಂದು ವಿಚಾರಣೆ ನಡೆಸಿತು.
ಈ ವೇಳೆ ರಾಜ್ಯ ಸರಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ಹಾಜರಾಗಿ ಅವಧಿ ಮುಗಿಯಲಿರುವ ಅಂದಾಜು ೧೮೮ ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಲು ಕನಿಷ್ಠ ೧೫೦ ದಿನಗಳು ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಜತೆಗೆ ಕೆಲವು ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡಬೇಕಿದೆ. ಮೊದಲು ಕರಡು ಹೊರಡಿಸಿ, ಆಕ್ಷೇಪಣೆ ಆಹ್ವಾನಿಸಿ, ಅವುಗಳನ್ನು ಇತ್ಯರ್ಥಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಇದಕ್ಕೆಲ್ಲ ಸುಮಾರು ೧೫೦ ದಿನಗಳು ಬೇಕಾಗುತ್ತದೆ. ಮೀಸಲಾತಿ ಅಂತಿಮ ಅಧಿಸೂಚನೆ ಬಳಿಕ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು. ಬಳಿಕ ಆಯೋಗ ಮುಂದಿನ ಪ್ರಕ್ರಿಯೆ ಪ್ರಾರಂಭಿಸಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.


ಆಕ್ಷೇಪಿಸಿದ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸುವ ಹಾಗೂ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸಕಾಲಕ್ಕೆ ಚುನಾವಣೆ ನಡೆಸದೇ ಸುದೀರ್ಘ ಅವಧಿಗೆ ಸ್ಥಳೀಯ ಸಂಸ್ಥೆಗಳನ್ನು ಖಾಲಿ ಇಡುವುದು, ಮಿತಿಗಿಂತ ಹೆಚ್ಚು ಅವಧಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವುದು ಸಂವಿಧಾನ ಮತ್ತು ಕಾಯ್ದೆಗೆ ವಿರುದ್ಧವಾಗಿದೆ. ಕೆಲವು ನಗರ ಸ್ಥಳೀಯ ಸಂಸ್ಥೆಗಳಿಗಷ್ಟೇ ವಾರ್ಡ್ ಮರು ವಿಂಗಡಣೆ ಮಾಡಬೇಕಿದೆ. ಅದನ್ನು ಮುಗಿಸಿ ಸರಕಾರ ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಅದರ ಜತೆಜತೆಯಾಗಿ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ತಯಾರಿಸಲು ಅನುಮತಿ ನೀಡಬೇಕು ಎಂದು ಕೋರಿದರು.
ಸಭೆ ನಡೆಸಲು ಸೂಚನೆ: ರಾಜ್ಯ ಸರಕಾರ ಮತ್ತು ಚುನಾವಣಾ ಆಯೋಗದ ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ನಗರ ಸ್ಥಳೀಯ ಸಂಸ್ಥೆಗಳಿಗೆ ಯಾವಾಗ ಚುನಾವಣೆ ನಡೆಸುತ್ತೀರಿ, ಅದಕ್ಕೂ ಮೊದಲು ವಾರ್ಡ್ ಮರು ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ನಿರ್ದಿಷ್ಟವಾಗಿ ಯಾವ ಕಾಲಮಿತಿಯಲ್ಲಿ ಮುಗಿಯಲಿದೆ. ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ ಚುನಾವಣಾ ಆಯೋಗ ಮತದಾರರ ಪಟ್ಟಿ ತಯಾರಿಸುವ ಕಾರ್ಯ ನಡೆಸಬಹುದೇ ಎಂಬ ಬಗ್ಗೆ ಚರ್ಚಿಸಲು ಸರಕಾರ ಮತ್ತು ಚುನಾವಣಾ ಆಯೋಗ ನ.೫ರಂದು ಚುನಾವಣಾ ಆಯೋಗದ ಕಚೇರಿಯಲ್ಲಿ ಸಭೆ ನಡೆಸಿ ಅದರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ನ.೧೧ಕ್ಕೆ ಮುಂದೂಡಿತು.
ಪ.ಪಂ. ಚುನಾವಣೆ ಸದ್ಯಕ್ಕಿಲ್ಲ
ಮೀಸಲು ನಿಗದಿ ಪಡಿಸಲು ರಾಜ್ಯ ಸರಕಾರ ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ೧೧ ಸದಸ್ಯ ಬಲ ಹೊಂದಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ನಿಗದಿತ ಸಮಯಕ್ಕೆ ಚುನಾವಣೆ ನಡೆಯುವುದು ಅಸಾಧ್ಯವಾಗಿದೆ. ನವೆಂಬರ್ ತಿಂಗಳ ೬ಕ್ಕೆ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಆಡಳಿತ ಅವಧಿ ಮುಕ್ತಾಯಗೊಳ್ಳಲಿದೆ. ಆ ಬಳಿಕ ಆಡಳಿತಾಧಿಕಾರಿ ನೇಮಕ ಆಗಬೇಕಿತು. ನಂತರ ಚುನಾವಣೆ ಘೋಷಣೆಯಾಗಿ ಹೊಸ ಸದಸ್ಯರ ಆಯ್ಕೆಯಾಗಬೇಕಿತ್ತು. ಆದರೆ ಪಟ್ಟಣ ಪಂಚಾಯತ್ ಅಧ್ಯಕ್ಷರು ಈಗಾಗಲೇ ಹೈಕೋರ್ಟ್ ಮೊರೆ ಹೋಗಿ ಪಟ್ಟಣ ಪಂಚಾಯತ್‌ಗೆ ಆಡಳಿತಾಧಿಕಾರಿ ನೇಮಕ ಮಾಡದಂತೆ ಮತ್ತು ಹಾಲಿ ಸದಸ್ಯರಿಗೆ ಪೂರ್ಣ ಅವಧಿ ಅಧಿಕಾರ ನೀಡುವಂತೆ ಮನವಿ ಮಾಡಿದ್ದರು. ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿಗಳು ಆಡಳಿತಾಧಿಕಾರಿ ನೇಮಕ ಮಾಡುವುದಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದ್ದಾರೆ. ಹಾಗಾಗಿ ಸದಸ್ಯರ ಆಡಳಿತ ಅವಧಿ ಮುಂದಿನ ತೀರ್ಪು ಬರುವವರೆಗೆ ಮುಂದುವರಿಯಲಿದೆ. ಇದೀಗ ರಾಜ್ಯ ಸರಕಾರ ಕೂಡ ಕಾಲಾವಕಾಶ ಕೇಳಿರುವುದರಿಂದ ಚುನಾವಣೆ ವಿಳಂಬವಾಗುವ ಸಾಧ್ಯತೆ ಕಂಡು ಬಂದಿದೆ.





