


ಬೆಳ್ತಂಗಡಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ ೨೦೨೫ನೇ ಸಾಲಿನ ದ.ಕ. ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದ ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ನೈನಾಡಿನ ಗೆಳೆಯರ ಬಳಗ ಸೇವಾ ಟ್ರಸ್ಟ್, ಅಗ್ರಿಲೀಫ್ನ ಅವಿನಾಶ್, ಮರದ ಕೆತ್ತನೆ ಶಿಲ್ಪಿ ಶಶಿಧರ ಆಚಾರ್ಯ ಬೆಳಾಲು, ರಂಗಭೂಮಿ ಕಲಾವಿದ ಹರೀಶ್ ಕುಮಾರ್ ಕೊಕ್ರಾಡಿ ಮತ್ತು ಕಂಬಳ ಕ್ಷೇತ್ರದ ಸತೀಶ್ ದೇವಾಡಿಗ ಅಳದಂಗಡಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ನ.೧ರಂದು ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಗುರುನಾರಾಯಣ ಸ್ವಾಮಿ ಸೇವಾಸಂಘ: ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ತತ್ವ ಹಾಗೂ ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶಕ್ಕೆ ಅನುಗುಣವಾಗಿ ಕಲೆದ ೬೪ ವರ್ಷಗಳಿಂದ ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದೆ. ೧೯೬೧ರಲ್ಲಿ ಕೇದೆ ದಿ.ಸುಬ್ಬ ಪೂಜಾರಿ ಅವರು ಸ್ಥಾಪಕ ಅಧ್ಯಕ್ಷರಾಗಿ ಮತ್ತು ದಿ.ಕುಂಜೀರ ಯಾನೆ ಸಿದ್ದಪ್ಪ ಪೂಜಾರಿಯವರು ಸ್ಥಾಪಕ ಕಾರ್ಯದರ್ಶಿಯಾಗಿ ಸಮಾಜದ ನಾಯಕರು ಒಟ್ಟು ಸೇರಿ ಪ್ರಾರಂಭಿಸಿದ್ದ ಈ ಸಂಘ ಮಿತ್ತಮಾರು ಬಿರ್ಮಣ ಪೂಜಾರಿಯವರು ಅಧ್ಯಕ್ಷರಾಗಿ ಹಾಗೂ ಉಜಿರೆ ಕೆ. ಎ. ನಾರಾಯಣರವರು ಕಾರ್ಯದರ್ಶಿಯಾಗಿದ್ದ ವೇಳೆ ನೋಂದಾವಣೆಗೊಂಡಿತ್ತು.ನಂತರ ಮಾಜಿ ಶಾಸಕರೂ ಸಂಘದ ಗೌರವಾಧ್ಯಕ್ಷರೂ ಆಗಿದ್ದ ದಿ.ಕೆ.ವಸಂತ ಬಂಗೇರ ಅವರು ಬೆಳ್ತಂಗಡಿಯ ಹೃದಯ ಭಾಗದಲ್ಲಿ ತನಗೆ ಬಂದ ನಿವೇಶನವನ್ನು ಸಂಘದ ಹೆಸರಿಗೆ ದಾಖಲಿಸಿ ಅದರಲ್ಲಿ ಬಂದ ಆದಾಯವನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು.
ಸಂಘದ ನೇತೃತ್ವದಲ್ಲಿ ಅನಾರೋಗ್ಯ ಪೀಡಿತರಿಗೆ ಸಾಂತ್ವನ ನಿಧಿ, ವಿಶೇಷ ಚೇತನರಿಗೆ ವ್ಹೀಲ್ಚಯರ್, ಪ್ರಕೃತಿ ವಿಕೋಪದಿಂದ ತೊಂದರೆಗೆ ಒಳಗಾದವರಿಗೆ ಪರಿಹಾರ, ರಕ್ತದಾನ ಶಿಬಿರ, ಮೆಡಿಕಲ್ ಕ್ಯಾಂಪ್ಗಳನ್ನು ನಡೆಸಲಾಗುತ್ತಿದ್ದು ಗುರು ಜಯಂತಿ, ಮಹಿಳಾ ದಿನಾಚರಣೆ ಮತ್ತು ಆಟಿದ ಕೂಟ ಆಯೋಜಿಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಮಾರ್ಗದರ್ಶನ ಹಾಗೂ ಸಮಾಜ ಭಾಂಧವರಿಗೆ ಕ್ರೀಡಾಕೂಟ ಮತ್ತು ಯುವಕ ಯುವತಿಯರ ವಧು-ವರ ಅನ್ವೇಷಣಾ ಕಾರ್ಯಕ್ರಮ, ನಾಟಿ ವೈದ್ಯರಿಗೆ ಸನ್ಮಾನ, ವೈದಿಕರ(ಶಾಂತಿ)ಸಮ್ಮೇಳನ, ದೈವಗಳ ಪಾತ್ರಿಗಳಿಗೆ ಅಭಿನಂದನಾ ಸಮಾರಂಭ, ಮೂರ್ತೆದಾರರ ಗುರುತಿಸುವಿಕೆ ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಮಿತ್ತಮಾರು ದಿ. ಬಿರ್ಮಣ ಪೂಜಾರಿಯವರ ಅಧ್ಯಕ್ಷರಾಗಿದ್ದಾಗ ೧೯೭೯ರಲ್ಲಿ ಬಿಲ್ಲವ ಸಮುದಾಯದ ಪ್ರಥಮ ತಾಲೂಕು ಸಮ್ಮೇಳನ ನಡೆದಿದ್ದು ಅಂದು ಲೋಕೋಪಯೋಗಿ ಖಾತೆಯ ಸಚಿವರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಆಗಮಿಸಿ ಅಭೂತಪೂರ್ವ ಮೆರವಣಿಗೆಗೆ ಚಾಲನೆ ನೀಡಿದ್ದರು. ಈ ಸಮ್ಮೇಳನದ ನೆನಪಿಗೆ ಕೋಟಿ ಚೆನ್ನಯ ಎಂಬ ಸ್ಮರಣ ಸಂಚಿಕೆ ಹೊರ ತರಲಾಗಿತ್ತು.
೧೯೯೮ರಲ್ಲಿ ಗಂಗಾಧರ ಮಿತ್ತಮಾರು ಅವರ ಅಧ್ಯಕ್ಷ ಅವಧಿಯಲ್ಲಿ ಯುವ ಬಿಲ್ಲವ ವೇದಿಕೆಯ ಸ್ಥಾಪಕ ಅಧ್ಯಕ್ಷ ಕೆ. ಹರೀಶ್ ಕುಮಾರ್ರವರ ಅವಧಿಯಲ್ಲಿ ಬಿಲ್ಲವರ ಬೃಹತ್ ಸಮಾವೇಶ ನಡೆದಿತ್ತು. ಸುಜಿತಾ ವಿ. ಬಂಗೇರ ಅವರು ಸ್ಥಾಪಕ ಅಧ್ಯಕ್ಷರಾಗಿರುವ ಬಿಲ್ಲವ ಮಹಿಳಾ ವೇದಿಕೆಯಡಿ ಬಿಲ್ಲವ ಮಹಿಳೆಯರು ಸಂಘಟಿತರಾಗಿ ಅನೇಕ ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿದ್ದಾರೆ. ೨೦೧೧ರಲ್ಲಿ ಅಧ್ಯಕ್ಷರಾಗಿದ್ದ ಪೀತಾಂಬರ ಹೇರಾಜೆಯವರ ಅವಧಿಯಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಗಿದ್ದು ಸುವರ್ಣ ರಥ ಸ್ಮರಣ ಸಂಚಿಕೆ ಹೊರ ತರಲಾಗಿತ್ತು. ಸಂಘದ ಮಾಜಿ ಅದ್ಯಕ್ಷರುಗಳು ಸಂಘದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ.
ಮಾಜಿ ನಿರ್ದೇಶಕರು, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ವೇದಿಕೆ ಅದ್ಯಕ್ಷರು ಹಾಗೂ ಸದಸ್ಯರ ಸಹಕಾರದಿಂದ ಪ್ರಸ್ತುತ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್. ಮತ್ತು ಎಲ್ಲಾ ನಿರ್ದೇಶಕರ ಮತ್ತು ಸದಸ್ಯರ ಸಹಕಾರದಿಂದ ಮುನ್ನಡೆಯುತ್ತಿರುವ ಸಂಸ್ಥೆಗೆ ಯುವ ನಾಯಕ ರಕ್ಷಿತ್ ಶಿವರಾಮ್ ಮತ್ತು ಜಿಲ್ಲಾ ನಾಯಕರ ಪ್ರಯತ್ನದಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ನ. ೧ರಂದು ಮಂಗಳೂರು ನೆಹರು ಮೈದಾನದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಇತರ ಗಣ್ಯರು ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಸಂಘದ ನಿಕಟ ಪೂರ್ವ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್., ಕೋಶಾಧಿಕಾರಿ ಪ್ರಶಾಂತ್ ಕುಮಾರ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ. ಕೆ. ಪ್ರಸಾದ್, ಸಂಘದ ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು, ನಿರ್ದೇಶಕರುಗಳಾದ ರವೀಂದ್ರ ಬಿ. ಆಮೀನ್ ಬಳಂಜ, ರೂಪೇಶ್ ಧರ್ಮಸ್ಥಳ, ಕಮಲಾಕ್ಷ ಬೆಳ್ತಂಗಡಿ, ಗುರುರಾಜ್ ಗುರಿಪಳ್ಳ ಮತ್ತು ಸುನಿಲ್ ಕನ್ಯಾಡಿ ಉಪಸ್ಥಿತರಿದ್ದರು.
ನೈನಾಡಿನ ಗೆಳೆಯರ ಬಳಗ ಸೇವಾ ಟ್ರಸ್ಟ್: ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಗಡಿಭಾಗದಲ್ಲಿರುವ ನಯನಾಡಿನ ಗೆಳೆಯರ ಬಳಗ ಸೇವಾ ಟ್ರಸ್ಟ್ ನೂರಾರು ಸಾಮಾಜಿಕ ಸೇವೆಗಳನ್ನು ನಡೆಸಿಕೊಂಡು ಬರುತ್ತಿದೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಒಂದು ಗ್ರಾಮ ವ್ಯಾಪ್ತಿಯಲ್ಲಿ ಯಾರೂ ಊಹಿಸದ ರೀತಿ ಸಾಮಾಜಿಕ ಸೇವೆ ನಡೆಸಿರುವ ಈ ಸಂಸ್ಥೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಬಗ್ಗೆ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹಾಕಿಕೊಂಡಿದೆ. ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಟ್ರಸ್ಟ್ನ ಗೌರವಾಧ್ಯಕ್ಷ ನೆಲ್ವಿಸ್ಟರ್ ಗ್ಲಾನ್ ಪಿಂಟೋ, ಅಧ್ಯಕ್ಷ ಡಾನ್ ಪ್ರವೀಣ್ ಕಾಸ್ತಾ, ಕಾರ್ಯದರ್ಶಿ ಅನಿಲ್ ರೋಶನ್ ಮತ್ತು ಅವಿಲ್ ಮೊರಸ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಅವಿನಾಶ್ ರಾವ್ ಪರಿಚಯ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿರುವ ಅವಿನಾಶ್ ರಾವ್ ಅವರು, ನಿಡ್ಲೆಯ ಲಕ್ಷ್ಮೀಶ ರಾವ್ ಮತ್ತು ಲಲಿತಾ ರಾವ್ ಅವರ ಪುತ್ರನಾಗಿ ೧೯೮೩ರಲ್ಲಿ ಜನಿಸಿದರು. ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರ್ಣಗೊಳಿಸಿ, ಎಸ್ಡಿಎಂ ಧಾರವಾಡದಲ್ಲಿ ಬಿಇ ಕೆಮಿಕಲ್ ಎಂಜಿನಿಯರಿಂಗ್ ಪೂರೈಸಿದರು. ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಿಂದ ಐಪಿಆರ್ ಕಾನೂನುಗಳ ಕುರಿತು ಡಿಪ್ಲೊಮಾ ಕೋರ್ಸ್ ಮಾಡಿರುವ ಅವರು, ಮಣಿಪಾಲ್ ಇನ್ಫೊರ್ಮ್ಯಾಟಿಕ್ಸ್ನಲ್ಲಿ ೧ ವರ್ಷ, ಆದಿತ್ಯ ಬಿರ್ಲಾ ಸಂಸ್ಥೆಯಲ್ಲಿ ೨ ವರ್ಷ, ಹನಿವೆಲ್ ಬೆಂಗಳೂರು ಮತ್ತು ಚಿಕಾಗೋದಲ್ಲಿ ೧೨ ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಷ್ಟ್ರೀಯ ಚಾಂಪಿಯನ್ಶಿಪ್ ಮೋಟಾರ್ಸೈಕಲ್ ರೇಸರ್, ಅಪೆಕ್ಸ್ ರೇಸಿಂಗ್ ಇಂಡಿಯಾದ ತಾಂತ್ರಿಕ ನಿರ್ದೇಶಕರಾಗಿಯೂ ಅವರು ಗಮನಸೆಳೆದಿದ್ದಾರೆ. ರೊಬೊಟಿಕ್ಸ್ಗೆ ೩ ಪೇಟೆಂಟ್ಗಳನ್ನು ಹೊಂದಿದ್ದಾರೆ. ಅವಿನಾಶ್ ರಾವ್ ಅವರು ಮಂಗಳೂರಿನಲ್ಲಿ ಜರ್ಮನಿ ಮತ್ತು ರಕ್ಷಣಾ ಸಂಸ್ಥೆಗಾಗಿ ಸೇವೆ ಸಲ್ಲಿಸುತ್ತಿರುವ ಡ್ರೋನ್ ಕಂಪನಿಯಾದ ರೊಬೊಟಿಕ್ಸ್ನ ಸಹ-ಸಂಸ್ಥಾಪಕರೂ ಹೌದು. ೨೦೧೯ರಲ್ಲಿ ಬರಂಗಾಯದಲ್ಲಿ ಆರಂಭಗೊಂಡ, ದಿವಂಗತ ಲಕ್ಷ್ಮಿಶ್ ರಾವ್ ಅವರು ಸ್ಥಾಪಿಸಿದ ಅಗ್ರಿಲೀಫ್ ಸಂಸ್ಥೆಯ ಸ್ಥಾಪಕ ಮತ್ತು ಆಡಳಿತ ನಿರ್ದೇಶಕರಾಗಿದ್ದಾರೆ.
ಪರಿಸರ ಸ್ನೇಹಿ ಹಾಗೂ ರೈತರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವಾಗಿರುವ ಅಗ್ರಿಲೀಫ್ ಸಂಸ್ಥೆ ಕೇವಲ ಹಾಳೆತಟ್ಟೆ ಉತ್ಪಾದನೆ ಮಾಡುವ ಪ್ಲೇಟ್ ಕಂಪನಿಯಲ್ಲ. ಅದೊಂದು ನವೀನ ತಂತ್ರಜ್ಞಾನಗಳನ್ನೊಳಗೊಂಡ ಗ್ರಾಮೀಣ ಭಾಗದ ಕಂಪನಿಯೂ ಆಗಿದ್ದು, ದೇಶಾದ್ಯಂತ ಗಮನಸೆಳೆದಿದೆ. ಝೊಮ್ಯಾಟೊ ಸಂಸ್ಥೆ ಕಳೆದ ಮೇ. ೭ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪ್ಲಾಸ್ಟಿಕ್ ಮುಕ್ತ ಫ್ಯೂಚರ್ ಪ್ಯಾಕಥಾನ್ ಸ್ಪರ್ಧೆಯ ಪ್ಯಾಕಿಂಗ್ ವಿಭಾಗದಲ್ಲಿ ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಪ್ರಥಮ ಸ್ಥಾನದೊಂದಿಗೆ ೧೦ ಲಕ್ಷ ರೂ. ನಗದು ಪುರಸ್ಕಾರವನ್ನು ಪಡೆದುಕೊಂಡಿತ್ತು. ಯಕ್ಷಗಾನದ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಅವಿನಾಶ್ ರಾವ್, ೨೦೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಕಲಾವಿದ ಎನ್ನುವುದು ಇಲ್ಲಿ ಉಲ್ಲೇಖಾರ್ಹ.
ಆಧುನಿಕತೆಗೆ ತೆರೆದುಕೊಂಡರೂ, ಸಾಂಪ್ರದಾಯಿಕ ಜಾನಪದ ಕಲೆಗಳ ಮೇಲೆ ಅಭಿಮಾನ, ಪ್ರೀತಿ ಹೊಂದಿರುವುದು ಅವರ ಹೆಗ್ಗಳಿಕೆ. ಅವಿನಾಶ್ ರಾವ್ ಅವರಿಗೆ ಉದ್ಯಮದಲ್ಲಿ ಪತ್ನಿ ಚೇತನಾ ಅವರು ಕೂಡ ಪೂರ್ಣ ಸಾಥ್ ನೀಡಿದ್ದಾರೆ. ಪುತ್ರ ಅಂಜನ್ ಧರ್ಮಸ್ಥಳದ ಎಸ್ಡಿಎಂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ.


ಶಿಲ್ಪಿ ಶಶಿಧರ ಆಚಾರ್ಯ: ಶಿಲ್ಪ ಕಲಾಗಾರರಾಗಿದ್ದು ಮರ ಮತ್ತು ಕಲ್ಲಿನ ಕೆತ್ತನೆಯಲ್ಲಿ ವಿವಿಧ ಕಲಾಕೃತಿಗಳನ್ನು ರಚಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ ಕಾಷ್ಠ ಶಿಲ್ಪಕಲಾ ಪ್ರವೀಣರಾಗಿರುವ ಶಿಲ್ಪಿ ಶಶಿಧರ ಆಚಾರ್ಯ ಅವರು ಬೆಳಾಲು ಗ್ರಾಮದ ಮಾಯ ಗಾಂಧಿ ನಗರದ ದಿ.ಚಂದ್ರಯ್ಯ ಆಚಾರ್ಯ ಮತ್ತು ಜಾನಕಿ ದಂಪತಿಯ ಪುತ್ರ. ಇವರು ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸದ ಬಳಿಕ ಕಾರ್ಕಳದ ಮಿಯಾರು ಸಿಇ ಕಾಮತ್ ಇನ್ಸಿಟ್ಯೂಟ್ ಆಫ್ ಆರ್ಟಸನ್ಸ್ನಲ್ಲಿ ಮರ ಮತ್ತು ಕಲ್ಲಿನ ಕೆತ್ತನೆಯ ತರಬೇತಿ ಪಡೆದರು. ಎಂ. ರಾಮ ಮೂರ್ತಿ, ಎಸ್. ವೆಂಕಟರಮಣ ಭಟ್, ಗುಣವಂತೇಶ್ವರ ಭಟ್, ಜಿ. ವಿ. ಶಿವ ಕುಮಾರ್ ಗುರುಗಳಾಗಿದ್ದರು. ಪಾಂಡಿಚೇರಿ, ಚೆನ್ನೈ, ಜೈಪುರ, ಉತ್ತರದ ಜಾನ್ ಕಲ್ಬರಲ್ ಸೆಂಟರ್ ಚಂಡೀಘಡ ಮೊದಲಾದ ವಿವಿಧ ಭಾಗಗಳಲ್ಲಿ ನಡೆದ ಶಿಲ್ಪಕಲಾ ಶಿಬಿರದಲ್ಲಿ ಭಾಗವಹಿಸಿ ಇವರು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ರಾಜ್ಯದ ಶಿಲ್ಪಕಲಾ ಅಕಾಡೆಮಿ ಆಯೋಜಿಸಿದ್ದ ಬೆಂಗಳೂರಿನ ಮಲ್ಲತ್ತಹಳ್ಳಿ, ಗುಲ್ಬರ್ಗ, ಬೆಂಗಳೂರು, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಂಡು ಕಾಷ್ಠ ಶಿಲ್ಪಕಲೆ ರಚಿಸಿ ಗೌರವ ಪಡೆದಿದ್ದಾರೆ.
ಮೂಡಬಿದ್ರೆ ಆಳ್ವಾಸ್ನಲ್ಲಿ ನಡೆದ ಶಿಲ್ಪ ವಿರಾಸತ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ. ೨೦೨೫ರಲ್ಲಿ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯ ೧೮ನೇ ವಾರ್ಷಿಕೋತ್ಸವದ ಶಿಲ್ಪ ಕಲಾ ಪ್ರದರ್ಶನದಲ್ಲಿ ೨ ಆಡಿಯ ಕನ್ನಿಕಾ ಪರಮೇಶ್ವರಿ ರಚಿಸಿ ಕರ್ನಾಟಕ ರಾಜ್ಯ ಶಿಲ್ಪ ಕಲಾ ಅಕಾಡೆಮಿ ಪ್ರಶಸ್ತಿ, ವಿಶ್ವಕರ್ಮ ಬ್ಯಾಂಕಿನ ೪೯ನೇ ವಾರ್ಷಿಕ ಮಹಾಸಭೆಯಲ್ಲಿ ದಿ.ಬೋಳೂರು ಹರಿಶ್ಚಂದ್ರ ಆಚಾರ್ಯ ಪುರಸ್ಕಾರ, ಪುಂಜಾಲಕಟ್ಟೆ ಸ್ವಸಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ವಸ್ತಿಶ್ರೀ ಪ್ರಶಸ್ತಿ, ಬಸವನ ಬಾಗೇವಾಡಿಯಲ್ಲಿ ಬಸವ ವಿಭೂಷಣ ರಾಷ್ಟ್ರ ಪ್ರಶಸ್ತಿ, ಬೆಂಗಳೂರು ಕದಂಬ ಶಿಲ್ಪ ಕಲಾ ಶಾಲೆಯಲ್ಲಿ ದಾಸೋಜ ಬಿರುದು, ಯಕ್ಷಗಾನ ಬಯಲಾಟ ಸಮಿತಿಯಿಂದ ಕಲಾರತ್ನ ಬಿರುದು ಪಡೆದಿರುವ ಇವರು ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮೂಡಬಿದ್ರೆ ವೆಂಕಟರಮಣ ದೇವಸ್ಥಾನ, ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನ, ಉಪ್ಪಿನಂಗಡಿ ಮತ್ತು ಬೆಳ್ತಂಗಡಿ ವಿಶ್ವ ಕರ್ಮಾಬ್ಯುದಯ ಸಂಘ, ಮಾಯ ಮಹೇಶ್ವರ ಭಜನಾ ಮಂಡಳಿ, ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರ, ಮಿಯಾರು ವನದುರ್ಗಾ ದೇವಸ್ಥಾನ, ಲಕ್ಷ್ಮೀ ಗ್ರೂಪ್ ಉಜಿರೆ, ಕುಕ್ಕಾವು ಸ.ಹಿ.ಪ್ರಾ.ಶಾಲೆ ನಡ, ಸ.ಪ್ರೌಢ ಶಾಲೆ, ಮಾಯ ಸ್ಟೈಕರ್ಸ್ ಕೊಲ್ಪಾಡಿ, ಅನಂತೋಡಿ ದೇವಸ್ಥಾನ, ಪಾಂಗಳ ಚಾಮುಂಡೇಶ್ವರಿ ದೇವಸ್ಥಾನ ಮೊದಲಾದ ಕಡೆ ಸನ್ಮಾನ ಪಡೆದಿದ್ದಾರೆ. ಉಡುಪಿ ಎಲ್ಲೂರು ವಿಶ್ವನಾಥ ದೇವಸ್ಥಾನ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ, ಮೂಡಬಿದ್ರೆ ವೆಂಕಟರಮಣ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ ಕೆಲಸ ಮಾಡಿ, ಬೆಳಾಲು ಮಾಯ ಮಹಾದೇವ ದೇವಸ್ಥಾನ, ಕೊಲ್ದಾಡಿ ಸುಬ್ರಹ್ಮಣೇಶ್ವರ ದೇವಸ್ಥಾನ, ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರ, ಅನಂತೋಡಿ ಅನಂತಪದ್ಮನಾಭ ದೇವಸ್ಥಾನ, ಮಿಯಾರು ವನ ದುರ್ಗಾ ದೇವಸ್ಥಾನ, ಅಳದಂಗಡಿ ಮಹಾ ಗಣಪತಿ ದೇವಸ್ಥಾನ, ದೇಲಂಪುರಿ ಮಹಾದೇವ ಮಹಾಗಣಪತಿ ದೇವಸ್ಥಾನ, ಉಜಿರೆ ಕಲ್ಲೆ ವನ ದುರ್ಗಾ ಕಲ್ಲುರ್ಟಿ ಪಂಜುರ್ಲಿ, ಮಹಿಸಂದಾಯ, ರಕೇಶ್ವರಿ, ಸಹ ಪರಿವಾರ ದೇವಸ್ಥಾನ, ಮಹಾವಿಷ್ಣು ದೇವಸ್ಥಾನ ಪಂಜ, ಸಿಗಂದೂರ್ ಗುಮಗೋಡ್ ಗೋಪಾಲಕೃಷ್ಣ ದೇವಸ್ಥಾನಗಳಲ್ಲಿ ಪ್ರಧಾನ ಶಿಲ್ಪಿಯಾಗಿ ಕೆಲಸ ಮಾಡಿರುವ ಇವರು ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಚಂದ್ರ ಮಂಡಲ ರಥದ ಕೆಲಸ ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಹಲವಾರು ದೇವಸ್ಥಾನ, ದೈವಸ್ಥಾನ ಮತ್ತು ನೂರಾರು ಮನೆಗಳ ಕಾಷ್ಠ ಶಿಲ್ಪ ಕೆಲಸ ನಿರ್ವಹಿಸಿರುವ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ನಾಟಕ ಕಲಾವಿದರೂ ಆಗಿದ್ದಾರೆ. ಸಮಾಜ ಸೇವೆಯೊಂದಿಗೆ ಕ್ರೀಡೆಗೆ ಪ್ರೋತ್ಸಾಹ ನೀಡಿ ಮಾಯ ಸ್ಟೈಕರ್ಸ್ ಕಬಡ್ಡಿ ತಂಡದ ಮಾಲಕರಾಗಿ ಹಲವು ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಕಾಷ್ಠ ಶಿಲ್ಪದ ಕುರಿತು ಶಾಲೆಗಳಲ್ಲಿ ಪ್ರಾತ್ಯಕ್ಷತೆ, ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಹರೀಶ್ ಕುಮಾರ್ ಕೊಕ್ರಾಡಿ: ಕೊಕ್ರಾಡಿ ಗ್ರಾಮದ ಹೇದಂಡಿ ಪಲ್ಕೆಯ ಬೇಬಿ ಮತ್ತು ಧರ್ಮಣ ದಂಪತಿಯ ಪ್ರಥಮ ಪುತ್ರರಾದ ಹರೀಶ್ ಕುಮಾರ್ ಅವರು ಹೈಸ್ಕೂಲ್ ವಿದ್ಯಾಭ್ಯಾಸ ಪೂರೈಸಿದ ಬಳಿಕ ಅಜ್ಜಿಗ್ ಏರ್ಲ ಇಜ್ಜಿ ಎಂಬ ನಾಟಕದಲ್ಲಿ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು. ನಂತರ ಸ್ಥಳೀಯ ಹವ್ಯಾಸಿ ಕಲಾವಿದರು ಕುತ್ಲೂರು ನಾಟಕ ತಂಡದಲ್ಲಿ ಹಾಸ್ಯ ಕಲಾವಿದನಾಗಿ ಸೇರ್ಪಡೆಗೊಂಡು ವಠಾರ, ಒಯಿಕ್ಲ ದಿನ ಬರೋಡು, ಪಿರಬನ್ನಗ, ಆರ್ ಎನ್ನಾರ್, ಜನ್ನೆ ಜನ ಎಂಚ, ಆಲ್ ಎನ್ನಾರ್ ಸಹಿತ ಹಲವಾರು ನಾಟಕದಲ್ಲಿ ಅಭಿನಯ ಮಾಡಿ ಕಳೆದ ೭ ವರ್ಷಗಳಿಂದ ತೆಲಿಕದ ಅರಸೆ ಪ್ರಸನ್ನ ಶೆಟ್ಟಿ ಬೈಲೂರು ಅವರ ಚೈತನ್ಯ ಕಲಾವಿದರು ಬೈಲೂರು ನಾಟಕ ತಂಡದಲ್ಲಿ ಸಕ್ರಿಯ ಹಾಸ್ಯ ಕಲಾವಿದರಾಗಿ ಸೇರ್ಪಡೆಗೊಂಡು ಬುದ್ಧಿ ಚಪ್ಪಟ್, ಪಿರಪೂಂಡುಗೆ, ಜುಟ್ಟು ಮೀಸೆ, ವಾರ್ಡ್ ನಂಬರ್ ೨, ಅಷ್ಟಮಿ ನಾಟಕಗಳು ಸೇರಿ ಸುಮಾರು ೩೮೦ಕ್ಕೂ ಅಧಿಕ ಕಡೆಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದಾರೆ. ಅಂತರ್ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುವ ಇವರು ಮುಂಬೈ, ಕುವೈಟ್ನಲ್ಲಿಯೂ ನಾಟಕ ಪ್ರದರ್ಶನ ನೀಡಿದ್ದಾರೆ.
ಕೊರಮ್ಮ, ದಸ್ಕತ್ ತುಳು ಚಲನಚಿತ್ರಗಳಲ್ಲಿಯೂ ಅಭಿನಯಿಸಿರುವ ಹರೀಶ್ ಅವರು ಕಾರ್ಯಕ್ರಮ ನಿರೂಪಣೆ, ಕ್ರೀಡಾಕೂಟದ ವೀಕ್ಷಕ ವಿವರಣೆಯಲ್ಲೂ ಛಾಪನ್ನು ಮೂಡಿಸಿದ್ದಾರೆ. ಕೊಕ್ರಾಡಿಯಲ್ಲಿ ನಡೆಯುವ ನವರಾತ್ರಿ ಉತ್ಸವದಲ್ಲಿ ಪ್ರತಿ ವರ್ಷ ವಿವಿಧ ವಿಭಿನ್ನ ರೀತಿಯ ಶಾರದಾ ದೇವಿಯ ದೇವಿ ಮಂಟಪ ಮಾಡುತ್ತಾ ರಂಗಕರ್ಮಿ ಅಗಿಯೂ ಜನ ಮೆಚ್ಚುಗೆ ಗಳಿಸಿರುವ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರಿಂದ ಪ್ರಶಸ್ತಿ ಗೌರವ, ತ್ರಿಶೂಲ್ ಫೆಂಡ್ಸ್ ಕೊಕ್ರಾಡಿ ಇವರಿಂದ ರಂಗದ ಐಸಿರಿ ಬಿರುದು ಗೌರವ ಪಡೆದಿದ್ದಾರೆ. ಅಲ್ಲದೆ ಶಾರದಾಂಬ ಯುವಕ ಮಂಡಲ ಕೊಕ್ರಾಡಿ, ಚೈತನ್ಯ ಕಲಾವಿದರು ಬೈಲೂರು ತಂಡದಿಂದ ಸನ್ಮಾನ, ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಕುತ್ಲೂರು, ಪರ್ಯಾಯ ಶ್ರೀಪುತ್ತಿಗೆ ಮಠ ಶ್ರೀ ಕೃಷ್ಣ ಮಠ ಉಡುಪಿ ಇವರಿಂದ ಪ್ರಶಸ್ತಿ, ನಲಿಕೆ ಸಮಾಜ ಸೇವಾ ಸಂಘ ಬೆಳ್ತಂಗಡಿ, ಪಾಣಾರ ಸಮಾಜ ಸೇವಾ ಸಂಘ ಪಡುಬಿದ್ರೆ ವತಿಯಿಂದ ಪ್ರಶಸ್ತಿ ಪಡೆದಿದ್ದಾರೆ.
ಸತೀಶ್ ದೇವಾಡಿಗ: ಸುಲ್ಕೇರಿಮೊಗ್ರು ಗ್ರಾಮದ ಹಿಮರಡ್ಕ ಮನೆಯ ರಾಮ ದೇವಾಡಿಗ ಮತ್ತು ಯಮುನಾ ದಂಪತಿಯ ಪ್ರಥಮ ಪುತ್ರರಾದ ಸತೀಶ್ ದೇವಾಡಿಗ ಅವರು ಕಂಬಳ ಕ್ಷೇತ್ರದ ಸಾಧಕರಾಗಿದ್ದಾರೆ. ಕಂಬಳ ಕ್ಷೇತ್ರದ ಪ್ರಸಿದ್ಧ ಓಟಗಾರರಾಗಿ ಹಿರಿತನದ ಅನುಭವವಿರುವ ಇವರು ಯುವ ಓಟಗಾರರಿಗೆ ಮಾರ್ಗದರ್ಶಕರಾಗಿದ್ದಾರೆ. ಅಳದಂಗಡಿ ಬಾಬು ಅವರ ಮಾರ್ಗದರ್ಶನದಲ್ಲಿ ಕಂಬಳ ಕ್ಷೇತ್ರಕ್ಕೆ ಕಾಲಿಟ್ಟ ಇವರು ಯಾವುದೇ ಕೋಣವನ್ನಾದರೂ ಸಮರ್ಥವಾಗಿ ಓಡಿಸುತ್ತಾ ಕೋಣಗಳನ್ನು ಪಳಗಿಸುವಲ್ಲಿ ಎತ್ತಿದ ಕೈ. ತುಳುನಾಡಿನ ಜನಪದ ಕ್ರೀಡೆ ಕಂಬಳ ಕ್ಷೇತ್ರದ ಹಲವಾರು ದಿಗ್ಗಜ ಸಾಧಕರ ಮಧ್ಯೆ ಅತ್ಯಂತ ಗೌರವದಿಂದ ಎದ್ದು ಕಾಣುವ ವ್ಯಕ್ತಿತ್ವದೊದಿಂಗೆ ಪ್ರತಿಷ್ಠಿತ ಕೋಣಗಳನ್ನು ಓಡಿಸಿದ ಕೀರ್ತಿ ಇವರದ್ದಾಗಿದೆ.
ಬಳ್ಳುಂಜೆ ರತ್ನಾಕರ ಸಾಲ್ಯಾನ್, ಗೋಳ್ತಮಜಲು ಪಂಡಿತ್ ಉಗ್ರಪ್ಪ ಶೆಟ್ಟಿ, ಕದ್ರಿ ಕೆಳಗಿನಮನೆ ಸೇಸು ಪೂಜಾರಿ, ಮೂಲ್ಕಿ ಪಯ್ಯೊಟ್ಟು ಸದಾಶಿವ ಸಾಲ್ಯಾನ್, ಕಂಕನಾಡಿ ಜೆ. ನಾರಾಯಣ ಪೂಜಾರಿ, ಕುಕ್ಕಂದೂರು ಶಂಕರಬೆಟ್ಟು ರವೀಂದ್ರ ಕುಮಾರ್, ಬಾರಕೂರು ಶಾಂತರಾಮ ಶೆಟ್ಟಿ, ಮೂಡಬಿದ್ರೆ ಕಕ್ಕಿಂಜೆ ವಿನು ವಿಶ್ವನಾಥ ಶೆಟ್ಟಿ, ಅತ್ತೂರು ಮನ್ಮಥ ಜೆ. ಶೆಟ್ಟಿ, ಕೊಳಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ, ಕಾಂತಾವರ ಅಂಬೋಡಿಮಾಡು ರಘುನಾಥ ದೇವಾಡಿಗ, ಸವಣೂರು ಸೇಣರಬೆಟ್ಟು ಜಗದೀಶ ಪೂಜಾರಿ, ವಲೇರಿಯನ್ ಡೇಸಾ ಮುಂತಾದವರ ಕೋಣಗಳನ್ನು ಓಡಿಸಿ ಬಹುಮಾನಗಳನ್ನು ದೊರಕಿಸಿಕೊಟ್ಟ ಹೆಗ್ಗಳಿಕೆ ಸತೀಶ್ ದೇವಾಡಿಗ ಅವರದು. ಕೊಳಚ್ಚೂರಿನ ಚಿನ್ನ, ಪಯ್ಯೊಟ್ಟಿನ ನಾಗರಾಜ, ಇರುವೈಲಿನ ತಾಟೆ ಮತ್ತು ಬೊಟ್ಟಿಮಾರು, ಬೋಳಂತೂರಿನ ರಾಟೆ ಇಂತಹ ಹೆಸರುವಾಸಿ ಕೋಣಗಳನ್ನು ಓಡಿಸಿರುವ ಇವರು ಕೃಷಿ ಬದುಕಿನೊಂದಿಗೆ ಪತ್ನಿ ವಸಂತಿ ಹಾಗೂ ಒಂದು ಹೆಣ್ಣು ಮಗುವಿನೊಂದಿಗೆ ಸಂಸಾರ ನಡೆಸುತ್ತಿದ್ದಾರೆ.
ಲಕ್ಷ್ಮೀ ಮಚ್ಚಿನರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ಉದಯವಾಣಿ ಪತ್ರಿಕೆಯ ಉಪಮುಖ್ಯ ವರದಿಗಾರ ಲಕ್ಷ್ಮೀ ಮಚ್ಚಿನ ಅವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂಲತಃ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದವರಾದ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿಯಲ್ಲಿ ನೆಲೆಸಿದ್ದಾರೆ. ೨೦೦೨ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಇವರು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ೨೦೦೮ರಿಂದ ಉದಯವಾಣಿಯ ಬೆಳ್ತಂಗಡಿ ವರದಿಗಾರರಾಗಿ ಮತ್ತು ೨೦೧೮ರಿಂದ ಕುಂದಾಪುರ ಕಚೇರಿಯಲ್ಲಿ ಉಪ ಮುಖ್ಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ಇವರು ಗ್ರಾಮೀಣ ಪತ್ರಿಕೋದ್ಯಮಕ್ಕೆ ಒತ್ತು ನೀಡಿದ್ದಾರೆ. ಗ್ರಾಮೀಣ ಸಮಸ್ಯೆಗಳು, ಬವಣೆಗಳು, ಹಾಗೂ ಅಭ್ಯುದಯ ಕುರಿತು ಪ್ರಕಟವಾದ ಇವರ ನೂರಾರು ವರದಿಗಳು ಯಶಸ್ಸು ಕಂಡು ಅನೇಕ ಸಮಸ್ಯೆಗಳು ಪರಿಹಾರಗೊಂದಿದೆ. ಅವರ ಮಾನವೀಯ ಸ್ಪಂದನೆಯ ವರದಿಗಳಿಂದಾಗಿ ಬದುಕುಳಿದ ಜೀವಗಳು, ನೆರವು ಪಡೆದ ಬಡ ಕುಟುಂಬಗಳು, ಮತ್ತು ಬದುಕು ಕಟ್ಟಿಕೊಂಡವರು ನೂರಾರು. ಎತ್ತಿನಹೊಳೆ ಯೋಜನೆಯ ವಿರುದ್ಧ ಸರಣಿ ವರದಿಗಳನ್ನು ಪ್ರಕಟಿಸುವ ಮೂಲಕ ಜನಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಪರಿಸರ ಅಭಿವೃದ್ಧಿ, ಮಾನವಾಸಕ್ತಿ ವರದಿಗಳು, ಹಾಗೂ ಛಾಯಾಗ್ರಹಣ ಅವರ ಆಸಕ್ತಿ ಮತ್ತು ಹವ್ಯಾಸಗಳಾಗಿವೆ. ಅಂಡಮಾನ್ನಲ್ಲಿ ನಡೆದ ರಾಷ್ಟ್ರಮಟ್ಟದ ಯುವಜನ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಮತ್ತು ಮುಂಬಯಿಯಲ್ಲಿ ನಡೆದ ರಾಷ್ಟ್ರಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಪತ್ರಿಕೋದ್ಯಮದ ಜೊತೆಗೆ ಸಾಹಿತ್ಯ ಮತ್ತು ಇತರ ಮಾಧ್ಯಮಗಳಲ್ಲೂ ಗಮನಾರ್ಹ ಕೊಡುಗೆ ನೀಡಿರುವ ಲಕ್ಷ್ಮೀ ಮಚ್ಚಿನ ಅವರು ಅನೇಕ ಪತ್ರಿಕೋದ್ಯಮ ಪುರಸ್ಕಾರಗಳನ್ನು ಪಡೆದಿದ್ದಾರೆ. ಅಲ್ಲದೆ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಮೂರು ಬಾರಿ ಪ್ರಥಮ ಬಹುಮಾನ ಮತ್ತು ಕವನ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ದಾರೆ. ಟಿವಿ ವಾಹಿನಿಗಾಗಿ ಸಾಕ್ಷ್ಯಚಿತ್ರ ರಚಿಸಿ ನಿರ್ದೇಶನ ಮಾಡಿರುವ ಇವರು ಕುಂದಾಪುರ ಪುರಸಭೆಯ ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದ್ದಾರೆ. ಚಂದನ ಟಿವಿಯಲ್ಲಿ ಮಕ್ಕಳ ನಾಟಕ ಪ್ರಸಾರವಾಗಿದ್ದು ಮಂಗಳೂರು ಆಕಾಶವಾಣಿ ಸೇರಿದಂತೆ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಲ್ಲಿ ಇವರ ರೂಪಕ, ನಾಟಕ, ಮತ್ತು ಭಾಷಣಗಳು ಪ್ರಸಾರವಾಗಿವೆ. ಇವರು ೨೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಅಂಡಮಾನ್ ಪ್ರವಾಸ ಕಥನ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿಯೂ ಸೇರ್ಪಡೆಯಾಗಿದೆ.ಲಕ್ಷ್ಮೀ ಮಚ್ಚಿನ ಅವರು ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರಿಂದ ಪ್ರಶಸ್ತಿ ಸ್ವೀಕರಿಸಿದರು.
ಕೊನೆಯ ಕ್ಷಣದಲ್ಲಿ ರಾಜಕೇಸರಿಯ ಸಂಸ್ಥಾಪಕ ದೀಪಕ್ ಹೆಸರು ಕೈ ಬಿಟ್ಟ ಜಿಲ್ಲಾಡಳಿತ!ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನೀಡಲಾಗುವ ದ.ಕ. ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿದ್ದ ಬೆಳ್ತಂಗಡಿಯ ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಅವರ ಹೆಸರನ್ನು ದ.ಕ. ಜಿಲ್ಲಾಡಳಿತ ಕೊನೇಯ ಕ್ಷಣದಲ್ಲಿ ಕೈ ಬಿಟ್ಟ ಘಟನೆ ನಡೆದಿದೆ. ೨೦೨೫ನೇ ಸಾಲಿನ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು ಅ.೩೧ರಂದು ರಾತ್ರಿ ಬಿಡುಗಡೆ ಮಾಡಲಾಗಿತ್ತು. ಪ್ರಾರಂಭದ ಪಟ್ಟಿಯಲ್ಲಿ ಸಮಾಜ ಸೇವೆಯ ವಿಭಾಗದಲ್ಲಿ ಬೆಳ್ತಂಗಡಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರ ಹೆಸರು ಇತ್ತು. ಈ ಬಗ್ಗೆ ವೆಬ್ಸೈಟ್ ಸಹಿತ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಆದರೆ ದ.ಕ. ಜಿಲ್ಲಾಡಳಿತ ರಾತ್ರಿ ಅಧಿಕೃತವಾಗಿ ಪಟ್ಟಿ ಬಿಡುಗಡೆ ಮಾಡುವ ವೇಳೆ ದೀಪಕ್ ಅವರ ಹೆಸರು ಕೈ ಬಿಡಲಾಗಿತ್ತು. ಇದು ಗೊಂದಲಕ್ಕೆ ಕಾರಣವಾಗಿತ್ತು.





