


ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಜೋಸೆಫ್ ಕುಟುಂಬ ಕಳೆದ 50 ಕ್ಕಿಂತ ಹೆಚ್ಚು ವರ್ಷಗಳು ವಾಸಿಸುತ್ತಿದ್ದು ಸರಕಾರ ಸಾಗುವಳಿಚೀಟಿ ನೀಡಿದ ಕೃಷಿ ಸ್ಥಳವನ್ನು ಅರಣ್ಯ ಪ್ರದೇಶ ಎಂಬ ಹೆಸರಿನಲ್ಲಿ ಏಕಾ ಏಕಿ ಒಕ್ಕಲೆಬ್ಬಿಸುವ ಕ್ರಮ ಕೃಷಿಕರಿಗೆ ಮಾಡಿದ ಅನ್ಯಾಯ ಎಂದು ಕೆ.ಎಸ್. ಎಂ.ಸಿ.ಏ ಕೇಂದ್ರ ಸಮಿತಿ ಆರೋಪಿಸಿದೆ. ಬಿಟ್ಟಿ ನೆಡುನಿಲಂ ರವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಸೇರಿ ಈ ಖಂಡನಾ ನಿರ್ಣಯವನ್ನು ಮಾಡಿದೆ. ನಿರ್ದೇಶಕ ಫಾ. ಆದರ್ಶ್ ಜೋಸೆಫ್ ಮಾತನಾಡಿ ಬಡ ಕೃಷಿಕರನ್ನು ಒಕ್ಕಲೆಬ್ಬಿಸುವ ಸರಕಾರದ ಇಂಥ ಹೀನಾಕೃತ್ಯಗಳು ಕೂಡಲೇ ನಿಲ್ಲಿಸದಿದ್ದಲ್ಲಿ ಕೃಷಿಕರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಎಚ್ಚೆತ್ತು ಅನ್ನದಾತರನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಹೇಳಿದ್ದಾರೆ.


ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಮಲಯಾಟ್ಟಿಲ್ ಅನೇಕ ವರ್ಷಗಳಿಂದ ಕೃಷಿ ಮಾಡಿ ಜೀವನ ಕಟ್ಟಿಕೊಳ್ಳುತ್ತಿದ್ದ ಈ ಬಡವರನ್ನು ಬೀದಿಗಿಳಿಸಿದ್ದು ಅನ್ಯಾಯದ ಪರಮೋನ್ನತಿ ಎಂದು ಹೇಳಿದರು. ಅಧ್ಯಕ್ಷರು ಮಾತನಾಡುತ್ತಾ, ನಮಗೆ ವಿಷಯ ತಿಳಿದದ್ದು ಕೊನೆಯ ಗಳಿಗೆಯಲ್ಲಿ ಆದರೂ ಎಲ್ಲಾ ಅಧಿಕಾರಿಗಳಿಗೂ ರಾಜಕೀಯ ಮುಖಂಡರುಗಳಿಗೂ ವಿಷಯ ತಿಳಿಸಿ ಒಕ್ಕಲೆಬ್ಬಿಸುವ ಕಾರ್ಯ ತಡೆಹಿಡಿಯಬೇಕೆಂದು ವಿನಂತಿಸಿ ಕೊಂಡರೂ ಸಮಯ ಮೀರಿತ್ತು ಇನ್ನು ಏನೂ ಮಾಡಲು ಸಾಧ್ಯ ಇಲ್ಲ ಎಂಬ ಉತ್ತರ ಸಿಕ್ಕಿರುತ್ತದೆ. ಈ ಬಗ್ಗೆ ಸರಕಾರಕ್ಕೆ ತಿಳಿಸಿ ಒಕ್ಕಲೆಬ್ಬಿಸುವ ಕಾರ್ಯ ನಿಲ್ಲಿಸಲು ಪತ್ರ ಬರೆಯಲಾಗುವುದು ಎಂದು ಹೇಳಿದರು. ಜಿಮ್ಸೆನ್ ಗುಂಡ್ಯ, ಪಿ. ಆರ್. ಓ. ಸೆಬಾಸ್ಟಿಯನ್ ಪಿ.ಸಿ., ಜಾಗತಿಕ ಸಮಿತಿ ಕಾರ್ಯದರ್ಶಿ ಜೈಸನ್ ಪಟ್ಟೀರಿಲ್, ಕೇಂದ್ರ ಸಮಿತಿ ಸದಸ್ಯರಾದ ಅಲ್ಪೋನ್ಸ, ರೀನಾ ಸಿ.ಬಿ., ಜಾರ್ಜ್ ಟಿ ವಿ., ಮುಂತಾದವರು ಪಾಲ್ಗೊಂಡರು.








