


ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಸರ್ವೇ ನಂ. 123/1 ರಲ್ಲಿ ಇರುವ 3634.70 ಎಕರೆ ವಿಸ್ತೀರ್ಣದ ಕೃಷಿಭೂಮಿಗೆ ಸಂಬಂಧಿಸಿದಂತೆ ಪ್ಲಾಟಿಂಗ್ ಪ್ರಕ್ರಿಯೆ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವುದರಿಂದ ಫಲಾನುಭವಿಗಳ ಅಸಮಾಧಾನ ತೀವ್ರಗೊಂಡಿದೆ.
ಈ ಭೂಮಿಯನ್ನು ಒಟ್ಟು 245 ಮಂದಿ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಅಧಿಕೃತವಾಗಿ ಹಂಚಿಕೆ ಮಾಡಲಾಗಿದ್ದು, ಎಲ್ಲರೂ ಕೃಷಿ ನಡೆಸುತ್ತಿದ್ದರು. ಆದರೆ ಸರ್ಕಾರದ ನಿರ್ದೇಶನದಂತೆ ಅರಣ್ಯ ಭಾಗವನ್ನು ಪ್ರತ್ಯೇಕಿಸಿ ಉಳಿದ ಭಾಗಕ್ಕೆ ಕಂದಾಯ ದಾಖಲೆ (RTC) ಸಿದ್ಧಪಡಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
ಶಿವಮೊಗ್ಗ ಅರಣ್ಯ ಸಂರಕ್ಷಣಾಧಿಕಾರಿಗಳ ತಾಂತ್ರಿಕ ಸಹಾಯಕರು, ಅರಣ್ಯಾಧಿಕಾರಿಗಳು, ಉಪ ವಲಯಾಧಿಕಾರಿಗಳು ಹಾಗೂ ಕಡಬ ಕಂದಾಯ ಇಲಾಖೆಯ ಭೂಮಾಪನ ಅಧಿಕಾರಿಗಳ ತಂಡವು ಕಳೆದ ಫೆಬ್ರವರಿ 20 ಮತ್ತು 25 ರಂದು ಎರಡು ದಿನಗಳ ಕಾಲ ಜಂಟಿ ಮೋಜಣಿ ಕಾರ್ಯವನ್ನು ನಡೆಸಿತ್ತು.


ನಿಯಮಾನುಸಾರ ನಕ್ಷೆ ತಯಾರಿಸಿ ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಲಾಯಿತು. ಅಲ್ಲಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ವರದಿ ಹಾಗೂ ನಕ್ಷೆಯ ಪ್ರತಿಯನ್ನು ಕಳುಹಿಸಿ “ಅರಣ್ಯ ಭಾಗವನ್ನು ಪ್ರತ್ಯೇಕಿಸಿ ಉಳಿದ ಭಾಗಕ್ಕೆ ಆರ್ಟಿಸಿ ತಯಾರಿಸಿ” ಎಂದು ಸೂಚನೆ ನೀಡಲಾಯಿತು.
ಆದರೆ ವರದಿ ಸಲ್ಲಿಕೆಯ ಬಳಿಕ ಯಾವುದೇ ಮುಂದಿನ ಕ್ರಮ ಕೈಗೊಳ್ಳದೆ ಫೈಲುಗಳೇ ಕಚೇರಿಗಳಲ್ಲಿ ಅಲುಗಾಡದೆ ನಿಂತುಹೋದಂತಾಗಿದೆ.
ಫಲಾನುಭವಿಗಳ ಸಭೆ – ಮನವಿ ಮತ್ತು ಹೋರಾಟದ ತೀರ್ಮಾನ: ಪ್ಲಾಟಿಂಗ್ ಪ್ರಕ್ರಿಯೆಯ ವಿಳಂಬ ಮತ್ತು ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಶನಿವಾರದಂದು ಕೌಕ್ರಾಡಿ ಗ್ರಾಮದ ಕಾವು ದೇವಸ್ಥಾನದ ಸಭಾಂಗಣದಲ್ಲಿ 123/1 ಸರ್ವೇ ನಂಬರಿನ ಸುಮಾರು 35ಕ್ಕೂ ಹೆಚ್ಚು ಫಲಾನುಭವಿಗಳು ಸೇರಿ ಸಭೆ ನಡೆಸಿದರು. ಸಭೆಯಲ್ಲಿ ಸರ್ವೇ ನಂ.123/1 ರ ಅರಣ್ಯ ಭಾಗವನ್ನು ಶೀಘ್ರವಾಗಿ ಪ್ರತ್ಯೇಕಿಸಿ ಉಳಿದ ಭಾಗಕ್ಕೆ ಕಂದಾಯ ದಾಖಲೆ ಸಿದ್ಧಪಡಿಸಬೇಕು. ಮಂಗಳೂರು ಜಿಲ್ಲಾಧಿಕಾರಿ ಕ್ರಮ ಕೈಗೊಂಡು ಪ್ಲಾಟಿಂಗ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಹಾಗೂ ಮುಂದಿನ ಹೋರಾಟದ ರೂಪುರೇಷೆ ಹಾಗೂ ತಾಲೂಕು ಶಾಸಕರಿಗೆ ಮನವಿ ಸಲ್ಲಿಸುವ ಕುರಿತು ಚರ್ಚೆ ನಡೆಯಿತು.ಫಲಾನುಭವಿಗಳು ಸರ್ಕಾರದ ಸ್ಪಷ್ಟ ಕ್ರಮದವರೆಗೂ ಹೋರಾಟ ಮುಂದುವರಿಸುವ ನಿಲುವು ವ್ಯಕ್ತಪಡಿಸಿದರು.
ಕೌಕ್ರಾಡಿ ಗ್ರಾಮ ಪಂಚಾಯಿತಿ ಸದಸ್ಯರು, ರಾಜಕೀಯ ಮುಖಂಡರು, ಸಮಾಜ ಸೇವಕರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದು, ಅಧಿಕಾರಿಗಳ ನಿರ್ಲಕ್ಷತೆಯನ್ನು ತೀವ್ರವಾಗಿ ಖಂಡಿಸಿದರು.









