ಅ.24: ಸೌತಡ್ಕ ಶ್ರೀ ಮಹಾಗಣಪತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ-ಎಲ್.ಕೆ.ಜಿ.ಯಿಂದ ಹತ್ತನೇ ತರಗತಿವರೆಗೆ ಶಿಕ್ಷಣ ನೀಡಲು ಸುಸಜ್ಜಿತ ಶಾಲೆ ನಿರ್ಮಾಣ: ಹರೀಶ್ ಮುಂಡ್ರುಪ್ಪಾಡಿ- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ವಿದ್ಯೆ ಸುಂದರ ಜೀವನಕ್ಕೊಂದು ಸಾಧನೆ ಅಥವಾ ಮೆಟ್ಟಿಲು. ದೇಶದ ಭವಿಷ್ಯದ ಭರವಸೆಯ ದೀಪಗಳು, ವಿದ್ಯಾರ್ಥಿಗಳು. ಈ ನೆಲೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿಯೇ ಮಕ್ಕಳಿಗೆ ಮೌಲ್ಯಾಧಾರಿತ. ಸುಚ್ಚಾರಿತ್ರ್ಯ ಬೋಧನೆಯುಳ್ಳ ಉತ್ಕೃಷ್ಟ ಭಾರತೀಯತೆಯ ಶಿಕ್ಷಣವನ್ನು ನೀಡಿ ಅವರಲ್ಲಿ ದೇಶಪ್ರೇಮ ಬೆಳೆಸಿ ಸತ್ಪ್ರಜೆಗಳನ್ನಾಗಿ ರೂಪಿಸುವ ಉದ್ದೇಶದಿಂದ 1915ರಲ್ಲಿ ಪ್ರಾರಂಭವಾದ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಶತಮಾನದ ಶೈಕ್ಷಣಿಕ ಪಯಣದೊಂದಿಗೆ ಹಂತ ಹಂತವಾಗಿ ಬೆಳೆದು 85 ಶಿಕ್ಷಣ ಸಂಸ್ಥೆಗಳು ಮತ್ತು 5 ಸಾಮಾಜಿಕ ಪ್ರಕಲ್ಪಗಳನ್ನು ಮುನ್ನಡೆಸಿಕೊಂಡು ಬಂದಿದ್ದು ಪ್ರಸ್ತುತ 21,276 ವಿದ್ಯಾರ್ಥಿಗಳು ವಿದ್ಯಾಸಂಸ್ಥೆಗಳಲ್ಲಿ ವಿದ್ಯಾವರ್ಜನೆ ಮಾಡುತ್ತಿದ್ದಾರೆ. ಶಿಕ್ಷಣ ರಂಗದಲ್ಲಿ ಇದೊಂದು ಅಪೂರ್ವ ಸಾಧನೆ ಎಂದು ಸೌತಡ್ಕ ಶ್ರೀ ಮಹಾಗಣಪತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಹೇಳಿದರು.ಅವರು ಅ.20 ರಂದು ಸುವರ್ಣ ಆರ್ಕೇಡ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಸಾಧನೆಗಳ ಸಂತಸದ ಈ ಕ್ಷಣದಲ್ಲೇ ಇನ್ನೊಂದು ಮಹತ್ತರ ಹೆಜ್ಜೆಯಾಗಿ ನಾಡಿನ ಪುಣ್ಯಕ್ಷೇತ್ರ, ಗಂಟೆ ಗಣಪ, ಬಯಲು ಆಲಯದ ಗಣಪ ಖ್ಯಾತಿಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಸನಿಹದಲ್ಲಿ ನೂತನ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದ್ದು ಸುಮಾರು 1 ಎಕರೆ 10 ಸೆಂಟ್ಸ್ ಜಾಗವನ್ನು ಖರೀದಿಸಿ ಕಟ್ಟಡದ ಶಿಲಾನ್ಯಾಸಕ್ಕೆ ಸಿದ್ಧತೆ ನಡೆಯುತ್ತಿದೆ. ದೇವ ಮಂದಿರದ ಸನಿಹ ಮೌಲ್ಯಯುತ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣ ನೀಡುವ ವಿದ್ಯಾ ಮಂದಿರ ತೆರೆಯಬೇಕೆಂಬ ಕೊಕ್ಕಡ, ಶಿಶಿಲ, ಶಿಬಾಜೆ, ರೆಖ್ಯ, ಹತ್ಯಡ್ಕ, ಕೌಕ್ರಾಡಿ, ಗೋಳಿತ್ತೊಟ್ಟು, ನಿಡ್ಲೆ, ಪಟ್ರಮೆ, ಕಳೆಂಜ ಗ್ರಾಮಗಳ ರೈತಾಪಿ ಜನರ ಆಶಯದಂತೆ ಈ ಶಾಲೆ ನಿರ್ಮಾಣವಾಗಲಿದೆ. ಎಲ್.ಕೆ.ಜಿ.ಯಿಂದ ಹತ್ತನೆ ತರಗತಿವರೆಗಿನ ಶಿಕ್ಷಣ ಒದಗಿಸಲು ಅನುಕೂಲವಾಗುವಂತೆ ಸುಸಜ್ಜಿತವಾಗಿ ಶಾಲೆಯನ್ನು ನಿರ್ಮಿಸಲಾಗುವುದು.

ಉದ್ದೇಶಿತ ಸೌತಡ್ಕ ಶ್ರೀ ಮಹಾಗಣಪತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಶಿಲಾನ್ಯಾಸ ಸಮಾರಂಭವು ಅ.24 ರಂದು ಬೆಳಿಗ್ಗೆ 8.04ರ ಸುಮುಹೂರ್ತದಲ್ಲಿ ನಮ್ಮ ಆರಾಧ್ಯ ದೇವರಾಗಿರುವ ಶ್ರೀ ಮಹಾಗಣಪತಿಯ ಆಶೀರ್ವಾದದೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಬಳಿಕ ಪೂರ್ವಾಹ್ನ 10.30ರಿಂದ ಸಭಾ ಕಾರ್ಯಕ್ರಮ ನಮ್ಮ ಮಾರ್ಗದರ್ಶಕರು, ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಡಾ.ಪ್ರಭಾಕರ ಭಟ್ ಕಲ್ಲಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಘನ ಭಾರತ ಸರಕಾರದ ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಕೇಂದ್ರ ಸಚಿವರಾದ ಕುಮಾರಸ್ವಾಮಿಯವರು ದಕ್ಷಿಣ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸರಿಸದರಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ, ಎಂ.ಆರ್.ಜಿ. ಗ್ರೂಪ್ ಮಂಗಳೂರಿನ ಚೇರ್‌ಮನ್ ಕೆ.ಪ್ರಕಾಶ್ ಶೆಟ್ಟಿ ಉಪಸ್ಥಿತರುವರು.

ಸಮಾರಂಭದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಸುಳ್ಯ, ವಿಧಾನಸಭಾ ಕ್ಷೇತ್ರದ ಶಾಸಕ ಭಾಗೀರಥಿ ಮುರುಳ್ಯ, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್, ಮಂಗಳೂರು ನಗರ -ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ, ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್, ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಎಸ್.ಎಲ್. ಭೋಜೇಗೌಡ, ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರಾಣೇಶ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕ್ಕಳ, ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸೌತಡ್ಕ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಪೆರ್ನೆ ರಾಜ್ ಬೋರ್‌ವೆಲ್ಸ್‌ನ ಕೃಷ್ಣರಾಜ್, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯ್ಕ, ಉದ್ಯಮಿಗಳಾದ ಶಿವಪ್ರಸಾದ್ ಇಜ್ಜಾವು, ಸುಧಾಕರ ಶೆಟ್ಟಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ ನ ಅಧ್ಯಕ್ ಕೃಷ್ಣ ಭಟ್ ಹಿತ್ತಿಲು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಗೌರವ ಉಪಸ್ಥಿತಿ ಇರುವರು ಎಂದು ಹರೀಶ್ ರಾವ್ ಮುಂಡ್ರುಪ್ಪಾಡಿ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಕೊಕ್ಕಡ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು, ಮಾಧ್ಯಮ ಸಂಚಾಲಕ ವೃಷಾಂಕ್ ಖಾಡಿಲ್ಕರ್, ಉದ್ಯಮಿ ಬಾಲಕೃಷ್ಣ ನೈಮಿಷ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here